IND Vs NZ ODI | KL ರಾಹುಲ್ ಆಟ ವ್ಯರ್ಥ; ನ್ಯೂಝಿಲ್ಯಾಂಡ್ ಗೆ 7 ವಿಕೆಟ್ ಗಳ ಜಯ
1-1ರಿಂದ ಸರಣಿ ಸಮಬಲ
Photo Credit : X
ರಾಜ್ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಭಾರತ – ನ್ಯೂಝಿಲ್ಯಾಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ, ನ್ಯೂಝಿಲ್ಯಾಂಡ್ ತಂಡವು 7 ವಿಕೆಟ್ ಗಳ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಭಾರತ ನೀಡಿದ 284 ರನ್ ಗಳ ಬೆನ್ನತ್ತಿದ ನ್ಯೂಝಿಲ್ಯಾಂಡ್ ತಂಡವು ಕೇವಲ 3 ವಿಕೆಟ್ ನಷ್ಟಕ್ಕೆ 47.3 ಓವರ್ ಗಳಲ್ಲಿ 286 ರನ್ ಗಳಿಸಿತು. ನ್ಯೂಝಿಲ್ಯಾಂಡ್ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಡೆರಿಲ್ ಮಿಷೆಲ್ ಭಾರತದ ಬೌಲರ್ ಗಳ ಬೆವರಿಳಿಸಿದರು. 117 ಎಸೆತ ಎದುರಿಸಿದ ಅವರು 2 ಸಿಕ್ಸರ್ 11 ಬೌಂಡರಿ ಸಹಿತ 131 ರನ್ ಗಳಿಸಿ ಅಜೇಯರಾಗಿ ಉಳಿದರು.
ಕುಲ್ ದೀಪ್ ಯಾದವ್ 10 ಓವರ್ ಗಳಲ್ಲಿ 82 ರನ್ ನೀಡಿ 1 ವಿಕೆಟ್ ಪಡೆದು ದುಬಾರಿ ಬೌಲರ್ ಎನಿಸಿಕೊಂಡರು.
ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು. ಗಿಲ್ 56 ರನ್ ಗಳಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಕೆ ಎಲ್ ರಾಹುಲ್ ನ್ಯೂಝಿಲ್ಯಾಂಡ್ ಬೌಲರ್ಗಳ ಚಳಿ ಬಿಡಿಸಿದರು. 92 ಎಸೆತ ಎದುರಿಸಿದ ಅವರು ಅಜೇಯ 112 ರನ್ ಗಳಿಸಿದರು. 1 ಸಿಕ್ಸರ್ 11 ಬೌಂಡರಿ ಬಾರಿಸಿದ ಅವರು, ಭಾರತದ ತಂಡಕ್ಕೆ ಗೌರವಯುತ ಇನ್ನಿಂಗ್ಸ್ ಕಟ್ಟಿದರು.
ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಕೊಹ್ಲಿ ಈ ಬಾರಿ 23 ರನ್ ಗಳಿಸಿದ್ದಾಗ ಬೌಲ್ಡ್ ಆದರು. ಶ್ರೇಯಸ್ ಅಯ್ಯರ್ 8 ರನ್ ಗಳಿಸಿದರು. ರೋಹಿತ್ ಶರ್ಮಾ 24, ಜಡೇಜಾ 27, ನಿತೀಶ್ ಕುಮಾರ್ ರೆಡ್ಡಿ 20 ರನ್ ಗಳಿಸಿದರು. 7 ವಿಕೆಟ್ ಕಳೆದುಕೊಂಡ ಭಾರತ ತಂಡವು 50 ಓವರ್ ಗಳಲ್ಲಿ 284 ರನ್ ಗಳಿಸಿತು.
ನ್ಯೂಝಿಲ್ಯಾಂಡ್ ಪರ ಕ್ರಿಸ್ ಕ್ಲಾರ್ಕ್ 3 ವಿಕೆಟ್ ಪಡೆದರು. ಕೈಲ್ ಜೆಮಿಸನ್, ಫೊಕ್ಸ್ , ಜೈಡೆನ್ ಲೆನಾಕ್ಸ್ 1, ಮಿಷೆಲ್ ಬ್ರಾಸ್ವೆಲ್ ತಲಾ ಒಂದು ವಿಕೆಟ್ ಪಡೆದರು.