×
Ad

ದೊಡ್ಡ ಗಾತ್ರದ ಬ್ಯಾಟ್‌ ಗಳಿಗೆ ನಿರ್ಬಂಧ ವಿಧಿಸಲು ಬಿಸಿಸಿಐ ಪ್ರಯತ್ನ; ಗೇಜ್ ಟೆಸ್ಟ್‌ ನಲ್ಲಿ ಕೆಕೆಆರ್ ಬ್ಯಾಟರ್ ಸುನೀಲ್ ನರೇನ್ ವಿಫಲ

Update: 2025-04-16 20:20 IST
PC : NDTV 

ಹೊಸದಿಲ್ಲಿ: ಮುಲ್ಲನ್‌ಪುರದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಮಂಗಳವಾರ ನಡೆದ ಐಪಿಎಲ್ ಪಂದ್ಯದ ವೇಳೆ ಸುನೀಲ್ ನರೇನ್ ಅವರ ಬ್ಯಾಟ್ ಗೇಜ್ ಪರೀಕ್ಷೆಯಲ್ಲಿ ವಿಫಲವಾಯಿತು.

ಐಪಿಎಲ್ ಪಂದ್ಯಗಳು ನಡೆಯುತ್ತಿರುವಾಗಲೇ ದೊಡ್ಡ ಗಾತ್ರದ ಬ್ಯಾಟ್‌ಗಳ ಮೇಲೆ ನಿರ್ಬಂಧ ವಿಧಿಸುವ ಭಾಗವಾಗಿ ಬಿಸಿಸಿಐ ಈ ಗೇಜ್ ಟೆಸ್ಟ್ ನಡೆಸುತ್ತಿದೆ.

ಕೆಕೆಆರ್ ತಂಡವು ಪಂಜಾಬ್ ವಿರುದ್ಧ 112 ರನ್ ಗುರಿ ಬೆನ್ನಟ್ಟುವ ಮೊದಲು ಈ ಪರೀಕ್ಷೆ ನಡೆಸಲಾಗಿದೆ.

ರಿಸರ್ವ್ ಅಂಪೈರ್ ಸಯ್ಯದ್ ಖಾಲಿದ್ ಆಟದ ಪ್ರದೇಶದ ಹೊರಗೆ ರ‍್ಯಾಂಡಮ್ ಟೆಸ್ಟ್ ನಡೆಸಿದರು. ನರೇನ್ ಹಾಗೂ ಕೆಕೆಆರ್‌ ನ ಇನ್ನೋರ್ವ ಆಟಗಾರ ರಘುವಂಶಿ ಒಟ್ಟಿಗೆ ನಿಂತಿದ್ದರು. ರಘುವಂಶಿ ಅವರ ಬ್ಯಾಟ್ ಪ್ರಮಾಣಿತ ಪರೀಕ್ಷೆಯಲ್ಲಿ ಪಾಸಾದರೆ, ನರೇನ್ ಅವರ ಬ್ಯಾಟ್ ದಪ್ಪವಾಗಿದ್ದು, ಇದು ಐಸಿಸಿಯ ನಿಗದಿತ ಬ್ಯಾಟ್ ಗಾತ್ರದ ಮಿತಿಗಳನ್ನು ಉಲ್ಲಂಘಿಸಿತು.

ಪಂಜಾಬ್ ವಿರುದ್ಧ ಬೌಲಿಂಗ್‌ ನಲ್ಲಿ 14 ರನ್‌ಗೆ 2 ವಿಕೆಟ್ ಪಡೆದು ಮಿಂಚಿದ್ದ ನರೇನ್ ಬ್ಯಾಟಿಂಗ್‌ ನಲ್ಲಿ ಕೇವಲ 5 ರನ್ ಗಳಿಸಿದ್ದರು.

16ನೇ ಓವರ್‌ ನಲ್ಲಿ ಅನ್ರಿಚ್ ನೋಟ್ಜೆ ಅವರನ್ನು ಆನ್‌ಫೀಲ್ಡ್ ಅಂಪೈರ್‌ ಗಳಾದ ಮೋಹಿತ್ ಕೃಷ್ಣದಾಸ್ ಹಾಗೂ ಸಾಯಿದರ್ಶನ್ ಕುಮಾರ್ ತಡೆದು ಬ್ಯಾಟ್ ಪರೀಕ್ಷೆ ನಡೆಸಿದರು. ನೋರ್ಟ್ಜೆ ಅವರ ಬ್ಯಾಟ್ ಕೂಡ ಗೇಜ್ ಟೆಸ್ಟ್‌ ನಲ್ಲಿ ವಿಫಲವಾಯಿತು. ಆಗ ನೋರ್ಟ್ಜೆ ಬದಲಿಗೆ ರಹಮನುಲ್ಲಾ ಗುರ್ಬಾಝ್ ಆಗಮಿಸಿದರು. ಆಂಡ್ರೆ ರಸೆಲ್ ತಕ್ಷಣವೇ ಔಟ್ ಆಗಿದ್ದರಿಂದ ಗುರ್ಬಾಝ್ ಚೆಂಡನ್ನು ಎದುರಿಸಲಿಲ್ಲ.

ಆಟಗಾರರು ದೊಡ್ಡ ಗಾತ್ರದ ಬ್ಯಾಟ್‌ ಗಳ ಮೂಲಕ ಅಕ್ರಮವಾಗಿ ಪ್ರಯೋಜನಗಳನ್ನು ಪಡೆಯುವುದನ್ನು ತಡೆಯಲು ಬ್ಯಾಟ್ ಆಯಾಮಗಳನ್ನು ಈಗ ಪಂದ್ಯದ ಮಧ್ಯದಲ್ಲಿ ಪರಿಶೀಲಿಸಲಾಗುತ್ತಿದೆ. ಈ ವರ್ಷ ಶಿಮ್ರಾನ್‌ ಹೆಟ್ಮೆಯರ್, ಫಿಲ್ ಸಾಲ್ಟ್ ಹಾಗೂ ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವಾರು ಆಟಗಾರರ ಬ್ಯಾಟನ್ನು ಮೈದಾನದಲ್ಲಿ ಪರೀಕ್ಷಿಸಲಾಗಿದೆ. ಈ ಹಿಂದೆ ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಬ್ಯಾಟ್ ಪರೀಕ್ಷಿಸಲಾಗುತ್ತಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News