ಭಾರತ ವಿರುದ್ಧದ ಸರಣಿಯಿಂದ ನ್ಯೂಝಿಲ್ಯಾಂಡ್ ಸ್ಟಾರ್ ಬೌಲರ್ ಅಲಭ್ಯ
Photo Credit: PTI
ವೆಲ್ಲಿಂಗ್ಟನ್, ಅ.10: ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ಸದ್ಯ ಗಂಭೀರ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ಈಗಾಗಲೇ ಮಾರ್ಕ್ ಚಾಪ್ಮನ್ ಹಾಗೂ ಝಾಕ್ ಫೋಕ್ಸ್‌ರನ್ನು ಕಳೆದುಕೊಂಡಿರುವ ಕಿವೀಸ್ ಪಡೆ, ಭಾರತ ತಂಡದ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಮುಂಬರುವ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಸ್ಟಾರ್ ವೇಗದ ಬೌಲರ್‌ನ ಸೇವೆಯಿಂದಲೂ ವಂಚಿತವಾಗಲಿದೆ.
ವಿಲಿಯಮ್ ಒ’ರೂರ್ಕಿ ಭಾರತ ವಿರುದ್ಧದ ಇಡೀ ಸ್ವದೇಶಿ ಸರಣಿಯಿಂದಲೇ ಹೊರಗುಳಿದಿದ್ದು, ಬಲ ಮಂಡಿರಜ್ಜುವಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಏಕದಿನ ಹಾಗೂ ಟೆಸ್ಟ್ ತಂಡಗಳಿಗೆ ಪರಿಗಣಿಸಲ್ಪಟ್ಟಿದ್ದ ವಿಲಿಯಮ್ ಒ’ರೂರ್ಕಿ ಅವರು ಮುನ್ನೆಚ್ಚರಿಕೆಯ ಕ್ರಮವಾಗಿ ಭಾರತ ವಿರುದ್ಧದ ಸರಣಿಯಿಂದ ಹೊರಗುಳಿಯಲಿದ್ದಾರೆ. ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ನ್ಯೂಝಿಲ್ಯಾಂಡ್ ತಂಡವು ಭಾರತ ವಿರುದ್ಧ ಐದು ಟಿ-20, ಐದು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಮೊದಲ ಟಿ-20 ಪಂದ್ಯವು ಅಕ್ಟೋಬರ್ 22ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ.
2025ರ ಏಪ್ರಿಲ್‌ನಲ್ಲಿ ಸ್ವದೇಶದಲ್ಲಿ ಕೊನೆಯ ಬಾರಿ ಆಡಿದ್ದ ಒ’ರೂರ್ಕಿ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಇನ್ನಷ್ಟು ವಿಳಂಬವಾಗಲಿದೆ. ಏಪ್ರಿಲ್‌ನಲ್ಲಿ ಬಾಂಗ್ಲಾದೇಶ ಪ್ರವಾಸದ ವೇಳೆ ಬೆನ್ನುನೋವಿನಿಂದ ಚೇತರಿಸಿಕೊಂಡು ನ್ಯೂಝಿಲ್ಯಾಂಡ್ ತಂಡಕ್ಕೆ ಮರಳಿದ್ದ ಒ’ರೂರ್ಕಿ, ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಮಂಡಿರಜ್ಜುವಿನ ಗಾಯಕ್ಕೆ ಒಳಗಾಗಿದ್ದರು.
‘ಭಾರತ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಸರಣಿಗೆ ವಿಲಿಯಮ್ ಅಲಭ್ಯರಾಗಿರುವುದು ತುಂಬಾ ಬೇಸರದ ವಿಚಾರ’ ಎಂದು ನ್ಯೂಝಿಲ್ಯಾಂಡ್ ಕೋಚ್ ರಾಬ್ ವಾಲ್ಟರ್ ತಿಳಿಸಿದ್ದಾರೆ.
ವೇಗದ ಬೌಲರ್ ಒ’ರೂರ್ಕಿ, ಅಕ್ಟೋಬರ್ 22ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಿಂದಲೂ ಈಗಾಗಲೇ ಹೊರಗುಳಿದಿದ್ದಾರೆ. ಕಿವೀಸ್ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಟಿ-20 ಸರಣಿಗಾಗಿ ಚಾಪ್ಮನ್ ಹಾಗೂ ಝಾಕ್ ಫೋಕ್ಸ್ ಬದಲಿಗೆ ಜೋಶ್ ಕ್ಲಾರ್ಕ್‌ಸನ್ ಹಾಗೂ ಬ್ಲೇರ್ ಟಿಕ್ನರ್ ತಂಡವನ್ನು ಸೇರಿದ್ದಾರೆ.
ಟಿ-20 ಸರಣಿಯ ಬಳಿಕ ಉಭಯ ತಂಡಗಳು ಐದು ಪಂದ್ಯಗಳ ಏಕದಿನ ಸರಣಿಯನ್ನಾಡಲಿವೆ. ಈ ಸರಣಿಯು ನವೆಂಬರ್ 1ರಿಂದ ಆರಂಭವಾಗಲಿದೆ. ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಟೆಸ್ಟ್ ಪಂದ್ಯಗಳನ್ನು ವೆಲ್ಲಿಂಗ್ಟನ್ ಹಾಗೂ ಕ್ರೈಸ್ಟ್‌ಚರ್ಚ್‌ನಲ್ಲಿ ಆಡಲಾಗುತ್ತದೆ. ಮೊದಲ ಟೆಸ್ಟ್ ಪಂದ್ಯವು ನವೆಂಬರ್ 19ರಿಂದ ಆರಂಭವಾಗಲಿದೆ.