ಬಿಗ್ ಬ್ಯಾಶ್ ಲೀಗ್ : ಸಿಡ್ನಿ ಥಂಡರ್ ತಂಡ ಸೇರಿದ ಅಶ್ವಿನ್
ರವಿಚಂದ್ರನ್ ಅಶ್ವಿನ್ (Photo credit: BCCI)
ಹೊಸದಿಲ್ಲಿ, ಸೆ.25: ಭಾರತೀಯ ಆಲ್ರೌಂಡರ್ ಆರ್.ಅಶ್ವಿನ್ ಮುಂಬರುವ ಬಿಗ್ ಬ್ಯಾಶ್ ಲೀಗ್‌ನಲ್ಲಿ (ಬಿಬಿಎಲ್) ಸಿಡ್ನಿ ಥಂಡರ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಆಸ್ಟ್ರೇಲಿಯ ಫ್ರಾಂಚೈಸಿಯು ಗುರುವಾರ ಖಚಿತಪಡಿಸಿದೆ.
ಅಶ್ವಿನ್ ಅವರು ಬಿಬಿಎಲ್ ಕ್ಲಬ್ ಅನ್ನು ಪ್ರತಿನಿಧಿಸುತ್ತಿರುವ ಭಾರತದ ಮೊದಲ ಮಾಜಿ ಆಟಗಾರನಾಗಿದ್ದಾರೆ.
“ಡೇವಿಡ್ ವಾರ್ನರ್ ಆಡುವ ರೀತಿಯು ನನಗೆ ಇಷ್ಟ. ನಾಯಕ ತನ್ನ ಮನಸ್ಸಿನಲ್ಲಿರುವುದನ್ನು ಹಂಚಿಕೊಂಡರೆ ಯಾವಾಗಲೂ ಉತ್ತಮವಾಗಿರುತ್ತದೆ. ಥಂಡರ್ ತಂಡದ ಪರ ಆಡಲು ಉತ್ಸುಕನಾಗಿರುವೆ” ಎಂದು ಕಳೆದ ತಿಂಗಳು ಐಪಿಎಲ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಅಶ್ವಿನ್ ಹೇಳಿದ್ದಾರೆ.
39ರ ಹರೆಯದ ಅಶ್ವಿನ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯದ ಪ್ರವಾಸದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರನೆ ನಿವೃತ್ತಿಯಾಗಿದ್ದರು. ಅನಿಲ್ ಕುಂಬ್ಳೆ(619) ನಂತರ ಭಾರತದ 2ನೇ ಗರಿಷ್ಠ ವಿಕೆಟ್ ಸರದಾರ(537)ನಾಗಿದ್ದಾರೆ.
ಮುಂದಿನ ಆವೃತ್ತಿಯ ಬಿಬಿಎಲ್, ಡಿ.14ರಂದು ಆರಂಭವಾಗಲಿದೆ. ಸಿಡ್ನಿ ಥಂಡರ್ ಡಿ.17ರಂದು ಹೊಬರ್ಟ್ ಹರಿಕೇನ್ಸ್ ತಂಡದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಹಾಂಕಾಂಗ್ ಸಿಕ್ಸಸ್-2025ರಲ್ಲಿ ಟೀಮ್ ಇಂಡಿಯಾವನ್ನು ಅಶ್ವಿನ್ ಪ್ರತಿನಿಧಿಸಲಿದ್ದಾರೆ ಎಂದು ಈ ತಿಂಗಳಾರಂಭದಲ್ಲಿ ಹಾಂಕಾಂಗ್ ಕ್ರಿಕೆಟ್ ಮಂಡಳಿಯು ದೃಢಪಡಿಸಿತ್ತು.