ಕೇಂದ್ರ ವಲಯ 532/4 ಡಿಕ್ಲೇರ್; ಸಂಕಷ್ಟದಲ್ಲಿ ಈಶಾನ್ಯ ವಲಯ
ದಾನಿಶ್ ದ್ವಿಶತಕ, ಯಶ್ ಅರ್ಧಶತಕ
ದಾನಿಶ್ ಮಲೆವಾರ್ | PTI
ಬೆಂಗಳೂರು, ಆ.29: ಅಗ್ರ ಸರದಿಯ ಬ್ಯಾಟರ್ ದಾನಿಶ್ ಮಲೆವಾರ್ ದ್ವಿಶತಕ(203 ರನ್, 222 ಎಸೆತ)ಹಾಗೂ ಯಶ್ ರಾಥೋಡ್(ಔಟಾಗದೆ 87 ರನ್, 108 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಕೇಂದ್ರ ವಲಯ ತಂಡವು ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈಶಾನ್ಯ ವಲಯದ ವಿರುದ್ಧ 4 ವಿಕೆಟ್ ಗಳ ನಷ್ಟಕ್ಕೆ 532 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.
ಕೇಂದ್ರ ವಲಯದ ಬೃಹತ್ ಮೊತ್ತಕ್ಕೆ ಉತ್ತರಿಸಹೊರಟಿರುವ ಈಶಾನ್ಯ ವಲಯವು 2ನೇ ದಿನದಾಟದಂತ್ಯಕ್ಕೆ 168 ರನ್ ಗಳಿಸುವಷ್ಟರಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನೂ 364 ರನ್ ಹಿನ್ನಡೆಯಲ್ಲಿದೆ.
ಅಂಕುರ್ ಮಲಿಕ್(31 ರನ್, 44 ಎಸೆತ)ಹಾಗೂ ಪಾಲ್ಝೊರ್ ತಮಂಗ್(ಔಟಾಗದೆ 3)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನಿಂಗ್ಸ್ ಆರಂಭಿಸಿದ ಕರ್ಣಜೀತ್ (48 ರನ್, 77 ಎಸೆತ)ಹಾಗೂ ಟೆಚಿ ಡೊರಿಯಾ(20 ರನ್, 74 ಎಸೆತ)ಮೊದಲ ವಿಕೆಟ್‌ಗೆ 72 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆಶಿಶ್ ಥಾಪ(35 ರನ್, 69 ಎಸೆತ)ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.
ಆದಿತ್ಯ ಥಾಕರೆ(3-23)ಹಾಗೂ ಹರ್ಷ ದುಬೆ(2-19)ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ಇದಕ್ಕೂ ಮೊದಲು 2 ವಿಕೆಟ್‌ಗಳ ನಷ್ಟಕ್ಕೆ 432 ರನ್ ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಕೇಂದ್ರ ವಲಯ ತಂಡವು ನಿನ್ನೆಯ ಮೊತ್ತಕ್ಕೆ ಬರೋಬ್ಬರಿ 100 ರನ್ ಸೇರಿಸಿದ ನಂತರ ಇನಿಂಗ್ಸ್ ಡಿಕ್ಲೇರ್ ಮಾಡಿತು. 203 ರನ್(222 ಎಸೆತ, 36 ಬೌಂಡರಿ, 1 ಸಿಕ್ಸರ್) ಗಳಿಸಿದ ದಾನಿಶ್ ಗಾಯಗೊಂಡು ನಿವೃತ್ತಿಯಾದರು. 32 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಯಶ್ ರಾಥೋಡ್ 108 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ ಔಟಾಗದೆ 87 ರನ್ ಗಳಿಸಿದರು.