ಲಾಹೋರ್ ಕೋಟೆಯಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಚಾಲನೆ; ನಾಳೆ ಮೊದಲ ಪಂದ್ಯ
PC : ICC
ಲಾಹೋರ್ : ಲಾಹೋರ್ ಕೋಟೆಯ ದೀವಾನೆ-ಖಾಸ್‌ನಲ್ಲಿ ಸೋಮವಾರ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಚಾಲನೆ ನೀಡಲಾಗಿದೆ. ಇದರೊಂದಿಗೆ 29 ವರ್ಷಗಳ ಬಳಿಕ ಆ ದೇಶದಲ್ಲಿ ಮೊದಲ ಐಸಿಸಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯ ಪ್ರಥಮ ಪಂದ್ಯವು ಬುಧವಾರ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಝಿಲ್ಯಾಂಡ್ ನಡುವೆ ನಡೆಯಲಿದೆ.
ಲಾಹೋರ್ ಕೋಟೆಯನ್ನು ಬೆಳಕಿನಿಂದ ಬೆಳಗಿಸುವ ಮೂಲಕ ‘ಕರ್ಟನ್ ರೇಸರ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 2017ರ ಬಳಿಕ ಚಾಂಪಿಯನ್ಸ್ ಟ್ರೋಫಿಯೂ ಮೊದಲ ಬಾರಿ ನಡೆಯುತ್ತಿದೆ.
2017ರಲ್ಲಿ ಬ್ರಿಟನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ಪ್ರಶಸ್ತಿ ಗೆದ್ದಿದೆ. ಹಾಗಾಗಿ, ಅದು ಹಾಲಿ ಚಾಂಪಿಯನ್ ಆಗಿ ಪಂದ್ಯಾವಳಿಯನ್ನು ಪ್ರವೇಶಿಸುತ್ತಿದೆ. 2017ರ ವಿಜೇತ ತಂಡದ ಸದಸ್ಯರು ಲಾಹೋರ್ ಕೋಟೆಯಲ್ಲಿ ನಡೆದ ಕರ್ಟನ್ ರೇಸರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಲಂಡನ್ ನ ಓವಲ್ ನಲ್ಲಿ ನಡೆದ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವು ಭಾರತವನ್ನು 180 ರನ್ ಗಳಿಂದ ಸೋಲಿಸಿತ್ತು.
‘‘ಐಸಿಸಿ ಪಂದ್ಯಾವಳಿಯೊಂದು 29 ವರ್ಷಗಳಲ್ಲಿ ಮೊದಲ ಬಾರಿ ಪಾಕಿಸ್ತಾನಕ್ಕೆ ಮರಳುತ್ತಿದೆ. ಈ ಪಂದ್ಯಾವಳಿಯು ಕೇವಲ ಕ್ರಿಕೆಟ್ ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಾಗಿದೆ. ಇದು ಪಾಕಿಸ್ತಾನದ ಆತಿಥ್ಯ ಮತ್ತು ಕ್ರಿಕೆಟ್ ಕುರಿತ ಮೋಹವನ್ನು ಪ್ರಸ್ತುತಪಡಿಸಲು ಲಭಿಸಿದ ಅವಕಾಶವಾಗಿದೆ’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ) ಅಧ್ಯಕ್ಷ ಮುಹ್ಸಿನ್ ನಖ್ವಿ ಹೇಳಿದರು.
ಲಾಹೋರ್ ಕೋಟೆಯ ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ಅಲ್ಲಿ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ. ‘‘ಈ ಸ್ಥಳವು ಮಹತ್ವದ್ದಾಗಿದೆ. ಅದು ಪಾಕಿಸ್ತಾನದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮಾತ್ರ ಪ್ರತಿನಿಧಿಸುವುದಲ್ಲ, ದೇಶದಲ್ಲಿ ಆಳವಾಗಿ ಬೇರೂರಿರುವ ಕ್ರಿಕೆಟ್ ಪರಂಪರೆಯತ್ತವೂ ಬೆಟ್ಟು ಮಾಡುತ್ತದೆ’’ ಎಂದು ನಖ್ವಿ ನುಡಿದರು.