×
Ad

ಪ್ರಸಕ್ತ ವರ್ಷದ ಐಪಿಎಲ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಔಟ್; ಅಕ್ಷರ್ ಪಟೇಲ್ ಹೇಳಿದ್ದೇನು?

Update: 2026-05-09 08:30 IST

ಅಕ್ಷರ್‌ ಪಟೇಲ್‌ x.com/IS_Netwrk29

ಹೊಸದಿಲ್ಲಿ: ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಶುಕ್ರವಾರ ಎಂಟು ವಿಕೆಟ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 2026ರ ಐಪಿಎಲ್ ಟೂರ್ನಿಯಿಂದ ನಿರ್ಗಮಿಸಿದಂತಾಗಿದೆ. ಪ್ಲೇಆಫ್ ಹಂತಕ್ಕೇರಲು ಡಿಸಿ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು.

ಪಂದ್ಯದಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂದು ಪಂದ್ಯದ ಬಳಿಕ ಅಕ್ಷರ್ ಪಟೇಲ್ ಒಪ್ಪಿಕೊಂಡರು. ಮುಂದಿನ ಸೀಸನ್ ಬಗ್ಗೆ ತಂಡ ಗಮನ ಹರಿಸಲಿದೆ ಎಂಬ ಸುಳಿವನ್ನೂ ಪಟೇಲ್ ನೀಡಿದರು.

ತವರು ಪ್ರೇಕ್ಷಕರ ಬೆಂಬಲದ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 142 ರನ್ ಗಳಿಸಿತು. ಫಿನ್ ಅಲೆನ್ ಅವರ ಭರ್ಜರಿ ಶತಕ (100) ಮತ್ತು ಕ್ಯಾಮರೂನ್ ಗ್ರೀನ್ (ಅಜೇಯ 33) ನೆರವಿನಿಂದ ಕೆಕೆಆರ್ ಕೇವಲ 14.2 ಓವರ್‌ಗಳಲ್ಲಿ ಗೆಲುವಿನ ಔಪಚಾರಿಕತೆ ಮುಗಿಸಿತು.

ತಾನು ಆಡಿದ ಒಟ್ಟು 11 ಪಂದ್ಯಗಳಲ್ಲಿ ಕೇವಲ ಎಂಟು ಅಂಕಗಳನ್ನು ಕಲೆ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 10 ಪಂದ್ಯಗಳಿಂದ ಒಂಬತ್ತು ಅಂಕಗಳನ್ನು ಕಲೆ ಹಾಕಿರುವ ಜತೆಗೆ ರನ್ ರೇಟ್ ಸುಧಾರಿಸಿಕೊಂಡಿರುವ ಕೆಕೆಆರ್‌ನ ಪ್ಲೇಆಫ್ ಕನಸು ಜೀವಂತವಾಗಿದೆ. ಆದಾಗ್ಯೂ, ಕೆಕೆಆರ್‌ಗೆ ನಾಕೌಟ್ ಹಾದಿ ಕಠಿಣವಾಗಿದೆ.

"ಸದ್ಯಕ್ಕೆ ನಾವು ಹಿಂದೆ ಸರಿದು ನಮ್ಮ ತಪ್ಪುಗಳ ಬಗ್ಗೆ ಯೋಚಿಸುತ್ತೇವೆ. ಆ ಬಳಿಕವೂ ಸುಧೀರ್ಘ ಪಯಣ ಮುಂದುವರಿಯುತ್ತದೆ ಹಾಗೂ ಮುಂದಿನ ವರ್ಷವೂ ಬರುತ್ತದೆ. ಆದ್ದರಿಂದ ಮುಂದಿನ ವರ್ಷಕ್ಕೆ ಎಂತಹ ಯೋಜನೆ ರೂಪಿಸಬಹುದು ಎಂಬ ಬಗ್ಗೆ ನಾವು ಚಿಂತಿಸುತ್ತೇವೆ" ಎಂದು ಅಕ್ಷರ್ ಪಟೇಲ್ ನುಡಿದರು.

"ಅದರ ಆಧಾರದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯದ ಇತರ ಆಟಗಾರರಿಗೆ ಅವಕಾಶ ನೀಡುವ ಬಗ್ಗೆಯೂ ಚಿಂತಿಸುತ್ತೇವೆ ಹಾಗೂ ಮುಂದಿನ ಅವಕಾಶಗಳನ್ನು ನೋಡುತ್ತೇವೆ" ಎಂದು ಅವರು ಮುಂದಿನ ವರ್ಷಕ್ಕೆ ಆಮೂಲಾಗ್ರ ಬದಲಾವಣೆಯ ಸುಳಿವು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News