ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸ | ಡಿಜಿಟಲ್ ಹಕ್ಕುಗಳನ್ನು ಬಾಚಿಕೊಂಡ ಜಿಯೋ ಹಾಟ್ ಸ್ಟಾರ್
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧದ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾದ ಡಿಜಿಟಲ್ ಹಕ್ಕುಗಳನ್ನು ಜಿಯೋ ಹಾಟ್ ಸ್ಟಾರ್ ಗೆದ್ದುಕೊಂಡಿದೆ.
ಪ್ರಮುಖ ಸರಣಿಯು ಜೂನ್ 20ರಿಂದ ಲೀಡ್ಸ್ ನ ಹೆಡ್ಡಿಂಗ್ಲೆಯಲ್ಲಿ ಆರಂಭವಾಗಲಿದೆ. ಈ ಸರಣಿಯ ನೇರ ಪ್ರಸಾರವು ಜಿಯೋ ಹಾಟ್ ಸ್ಟಾರ್ ನ ಡಿಜಿಟಲ್ ವೇದಿಕೆಯಲ್ಲಿ ಲಭ್ಯ ಇರಲಿದೆ.
ಈ ಒಪ್ಪಂದವು ಸೋನಿ ಎಂಟರ್ ಟೈನ್ ಮೆಂಟ್ ನೆಟ್ ವರ್ಕ್ ನೊಂದಿಗಿನ ಉಪ ಪರವಾನಗಿಯ ಭಾಗವಾಗಿದೆ.
ಸುಮಾರು ಒಂದು ತಿಂಗಳಿಂದ ಮಾತುಕತೆ ನಡೆಯುತ್ತಿದ್ದ ಈ ಒಪ್ಪಂದವನ್ನು ಕಳೆದ 24 ಗಂಟೆಗಳಲ್ಲಿ ಅಂತಿಮಗೊಳಿಸಲಾಗಿದೆ. ಜಿಯೋ ಹಾಟ್ ಸ್ಟಾರ್ ಪಂದ್ಯಗಳನ್ನು ಡಿಜಿಟಲ್ ರೂಪದಲ್ಲಿ ಸ್ಟ್ರೀಮ್ ಮಾಡಲಿದೆ. ಟಿವಿ ಪ್ರಸಾರ ಹಕ್ಕುಗಳನ್ನು ಸೋನಿ ಉಳಿಸಿಕೊಂಡಿದ್ದು, ತನ್ನ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ನಲ್ಲಿ ಟೆಸ್ಟ್ ಸರಣಿಯನ್ನು ಪ್ರಸಾರ ಮಾಡಲಿದೆ ಎಂದು ಕ್ರಿಕ್ ಬಝ್ ವರದಿ ಮಾಡಿದೆ.
ಲೀಡ್ಸ್ ನ ಮೊದಲ ಪಂದ್ಯ ನಡೆದ ನಂತರ ಇನ್ನುಳಿದ 4 ಟೆಸ್ಟ್ ಪಂದ್ಯಗಳು ಎಜ್ ಬಾಸ್ಟನ್(ಜುಲೈ 2), ಲಾರ್ಡ್ಸ್(ಜುಲೈ10), ಓಲ್ಡ್ ಟ್ರಾಫೋರ್ಡ್(ಜುಲೈ 23) ಹಾಗೂ ದಿ ಓವಲ್(ಜುಲೈ 31)ಮೈದಾನದಲ್ಲಿ ನಡೆಯಲಿದೆ.