FIFA World Cup 2026 | ಆಫ್ರಿಕಾದ 9 ತಂಡಗಳು ನಾಕೌಟ್ ಹಂತಕ್ಕೆ ತೇರ್ಗಡೆ
Photo Credit : AP
ಹ್ಯೂಸ್ಟನ್, ಜೂ.29: ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಫ್ರಿಕಾ ದೇಶಗಳು ಅತ್ಯುತ್ತಮ ಪ್ರದರ್ಶನ ನೀಡಿವೆ. ಒಟ್ಟು 10 ತಂಡಗಳ ಪೈಕಿ 9 ತಂಡಗಳು ನಾಕೌಟ್ ಹಂತಕ್ಕೆ ತೇರ್ಗಡೆಯಾಗುವ ಮೂಲಕ ದಾಖಲೆ ನಿರ್ಮಿಸಿವೆ. ಏಷ್ಯಾದ ಕೇವಲ ಎರಡು ತಂಡಗಳು ಅಂತಿಮ-32ರ ಸುತ್ತಿಗೆ ತಲುಪಿವೆ.
2026ರ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಏಷ್ಯಾದ ತಂಡಗಳು ತೀವ್ರ ನಿರಾಶೆ ಮೂಡಿಸಿವೆ.
‘ಜಾಗತಿಕ ಸ್ಪರ್ಧಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶವನ್ನು ಪಡೆಯಲು ಏಷ್ಯಾಕ್ಕೆ ಅಷ್ಟು ಉನ್ನತ ಮಟ್ಟದಲ್ಲಿ ಆಡಲು ಹೆಚ್ಚಿನ ಆಟಗಾರರ ಅಗತ್ಯವಿದೆ’ ಎಂದು ಗ್ರೂಪ್ ಹಂತದಲ್ಲಿ ಎಲ್ಲ ಮೂರೂ ಪಂದ್ಯಗಳನ್ನು ಸೋತಿರುವ ಜೋರ್ಡಾನ್ ತಂಡದ ಕೋಚ್ ಜಮಾಲ್ ಸೆಲ್ಲಾಮಿ ಅಭಿಪ್ರಾಯಪಟ್ಟರು.
‘ನಮ್ಮ ಆಟಗಾರರು ಹೊಸಬರು ಹಾಗೂ ನಾವು ಇಲ್ಲಿ ಪಡೆದ ಅನುಭವದ ಲಾಭವನ್ನು ಪಡೆದುಕೊಳ್ಳಬೇಕು. ಅಂತಹ ಉನ್ನತ ಮಟ್ಟದ ಸ್ಪರ್ಧೆಯಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಅರ್ಜೆಂಟೀನಾ ವಿರುದ್ಧ ಜೋರ್ಡಾನ್ ತಂಡವು 1-3 ಅಂತರದಿಂದ ಸೋತ ನಂತರ ಸೆಲ್ಲಾಮಿ ಹೇಳಿದ್ದಾರೆ.
‘ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ 10 ಆಫ್ರಿಕನ್ ತಂಡಗಳ ಪೈಕಿ ಒಂಬತ್ತು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದಿವೆ. ದುರದೃಷ್ಟವಶಾತ್ ಏಷ್ಯಾ ತಂಡಗಳು ಈ ರೀತಿಯ ಪ್ರದರ್ಶನ ನೀಡಿಲ್ಲ. ಉನ್ನತ ಮಟ್ಟದಲ್ಲಿರಲು, ಉನ್ನತ ಮಟ್ಟದಲ್ಲಿ ಆಡಲು ನಮಗೆ ಹೆಚ್ಚಿನ ಆಟಗಾರರು ಬೇಕು’ ಎಂದು ಸೆಲ್ಲಾಮಿ ಹೇಳಿದ್ದಾರೆ.
ಏಷ್ಯನ್ ತಂಡಗಳ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡಿರುವ ಜಪಾನ್ ಕೋಚ್ ಹಾಜಿಮೆ ಮೊರಿಯಾಸು, ತಮ್ಮ ತಂಡವು ಏಷ್ಯನ್ ಫುಟ್ಬಾಲ್ ಗೆ ಭರವಸೆಯಾಗಬೇಕೆಂದು ಆಶಿಸಿದರು.
ಸ್ವೀಡನ್ ವಿರುದ್ಧ 1-1ರಿಂದ ಡ್ರಾ ಸಾಧಿಸಿದ ನಂತರ ಮೊರಿಯಾಸು ಮಾರ್ಗದರ್ಶನದಲ್ಲಿ ಜಪಾನ್ ತಂಡವು 32ರ ಸುತ್ತಿನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತು. ಗ್ರೂಪ್ ಎಫ್‌ನಲ್ಲಿ ನೆದರ್‌ಲ್ಯಾಂಡ್ಸ್ ನಂತರ ಎರಡನೇ ಸ್ಥಾನ ಪಡೆಯಿತು. ಜಪಾನ್ ತಂಡವು ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡವನ್ನು ಎದುರಿಸಲಿದೆ.
ಇದೇ ವೇಳೆ 2026ರ ವಿಶ್ವಕಪ್ ಟೂರ್ನಿಯಲ್ಲಿ ಆಫ್ರಿಕಾದ 9 ತಂಡಗಳು ಅಂತಿಮ-32ರ ಸುತ್ತಿಗೆ ಪ್ರವೇಶಿಸಿವೆ. ಈ ಹಿಂದೆ 2014 ಹಾಗೂ 2022ರಲ್ಲಿ ಕೇವಲ ಎರಡು ದೇಶಗಳು ಅಂತಿಮ-16ರ ಸುತ್ತು ತಲುಪಿದ್ದವು.
ಆಫ್ರಿಕಾ ತಂಡಗಳ ಪೈಕಿ ಕೇಪ್ ವರ್ಡ್ ಸಾಧನೆ ಅತ್ಯಮೋಘವಾಗಿದೆ. ಇದೇ ಮೊದಲ ಬಾರಿ ವಿಶ್ವಕಪ್ ನಲ್ಲಿ ಆಡಿರುವ ಪುಟ್ಟ ದ್ವೀಪರಾಷ್ಟ್ರ ಕೇಪ್ ವರ್ಡ್ ತಾನಾಡಿದ ಮೊದಲ ಪಂದ್ಯದಲ್ಲಿ ಸ್ಪೇನ್ ತಂಡದ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತ್ತು. ಉರುಗ್ವೆ ತಂಡವನ್ನು ನಿರಾಶೆಗೊಳಿಸಿದ ಕೇಪ್ ವರ್ಡ್ ನಿರ್ಭೀತಿಯ ಪ್ರದರ್ಶನದಿಂದ ನಾಕೌಟ್ ಹಂತದಲ್ಲಿ ಸ್ಥಾನ ಪಡೆದಿತ್ತು.
‘ಪುಟ್ಟ ದೇಶಗಳು ಏಕಾಗ್ರತೆ, ದೃಢನಿಶ್ಚಯ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ದೊಡ್ಡ ಗುರಿ ಹೊಂದಬಹುದು ಎಂಬುದಕ್ಕೆ ನಾವು ಒಂದು ಉದಾಹರಣೆಯಾಗಿದ್ದೇವೆ. ಯಾವುದೂ ಅಸಾಧ್ಯವಲ್ಲ ಎಂದು ನಾವು ತೋರಿಸಿಕೊಟ್ಟಿದ್ದೇವೆ. ನಾವು ನಮ್ಮ ದೇಶವನ್ನು ಪ್ರತಿನಿಧಿಸಿದ್ದೇವೆ. ನಾವು ಆಫ್ರಿಕಾ ಹಾಗೂ ಪ್ರಪಂಚದಾದ್ಯಂತದ ಸಣ್ಣ ದೇಶಗಳನ್ನು ಕೂಡ ಪ್ರತಿನಿಧಿಸುತ್ತೇವೆ’ ಎಂದು ನಾಕೌಟ್‌ಗೆ ಅರ್ಹತೆ ಪಡೆದ ನಂತರ ಮುಖ್ಯ ತರಬೇತುದಾರ ಪೆಡ್ರೊ ಲೀಟಾವೊ ಬ್ರಿಟೊ ಹೇಳಿದ್ದಾರೆ.
ಖತರ್‌ನಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೆ ತಲುಪಿದ್ದು ಆಕಸ್ಮಿಕವಲ್ಲ ಎಂದು ಮೊರಾಕ್ಕೊ ತಂಡ ದೃಢಪಡಿಸಿದೆ. ನಾರ್ವೆ ಹಾಗೂ ಫ್ರಾನ್ಸ್ ತಂಡದ ವಿರುದ್ಧದ ಸೋಲಿನಿಂದ ಚೇತರಿಸಿಕೊಂಡಿರುವ ಸೆನೆಗಲ್ ಮುಂದಿನ ಸುತ್ತಿಗೇರಿದೆ.
ಈಜಿಪ್ಟ್ ತಂಡವು ಒಂದು ಗೆಲುವು ಹಾಗೂ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿ ‘ಜಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದೆ. ಜರ್ಮನಿ ತಂಡದ ವಿರುದ್ಧ ವೀರೋಚಿತ ಸೋಲಿನ ನಂತರ ಐವರಿ ಕೋಸ್ಟ್ ತಂಡವು ಕ್ಯುರಾಕೊ ಹಾಗೂ ಈಕ್ವೆಡಾರ್ ವಿರುದ್ಧ ಜಯ ಗಳಿಸಿತ್ತು. ಅಲ್ಜೀರಿಯಾ ಹಾಗೂ ಸೆನೆಗಲ್ ತಂಡಗಳು ಅತ್ಯುತ್ತಮ ಮೂರನೇ ತಂಡಗಳಾಗಿ ಅಂತಿಮ-32ರ ಸುತ್ತಿಗೆ ತಲುಪಿದವು.
ಜಪಾನ್ ತಂಡವು ಏಷ್ಯಾದ ಬಲಿಷ್ಠ ತಂಡವೆಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಆಸ್ಟ್ರೇಲಿಯಾ ತಂಡ ಕೂಡ ನಾಕೌಟ್ ಸುತ್ತಿಗೇರಿದೆ. ಸೌದಿ ಅರೇಬಿಯಾ ತಂಡವು ಉನ್ನತ ರ್ಯಾಂಕಿನ ಎದುರಾಳಿಗಳ ವಿರುದ್ಧ ಶಿಸ್ತುಬದ್ಧ ಪ್ರದರ್ಶನ ನೀಡಿದೆ. ಆದರೆ, ಮುಂದಿನ ಸುತ್ತಿಗೇರಲು ವಿಫಲವಾಗಿದೆ.
ಖತರ್, ಇರಾನ್, ಇರಾಕ್ ಹಾಗೂ ವಿಶ್ವಕಪ್ ನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿರುವ ಜೋರ್ಡಾನ್ ತಂಡಗಳು ಗ್ರೂಪ್ ಹಂತದಲ್ಲಿ ಸೋತು ನಿರ್ಗಮಿಸಿವೆ.