×
Ad

ಭಾರತ ವಿರುದ್ಧ ಐತಿಹಾಸಿಕ T20 ಸರಣಿ ಗೆದ್ದ ಬೆನ್ನಿಗೇ ಐರ್ಲೆಂಡ್ ಕೋಚ್ ರಾಜೀನಾಮೆ!

Update: 2026-06-29 20:56 IST

 ಹೆನ್ರಿಕ್ ಮಲಾನ್ | Photo Credit : @cricbuzz

ಬೆಲ್‌ಫಾಸ್ಟ್, ಜೂ.29: ಐರ್ಲೆಂಡ್ ತಂಡವು ಭಾರತದ ವಿರುದ್ಧದ T20 ಸರಣಿಯನ್ನು ಗೆದ್ದ 24 ಗಂಟೆಯೊಳಗೆ ಮುಖ್ಯ ಕೋಚ್ ಹೆನ್ರಿಕ್ ಮಲಾನ್ ರಾಜೀನಾಮೆ ನೀಡಿದ್ದಾರೆ.

ರವಿವಾರ ನಡೆದ ಎರಡನೇ T20 ಪಂದ್ಯದಲ್ಲಿ ಒಂದು ರನ್‌ನಿಂದ ರೋಚಕ ಜಯ ಸಾಧಿಸಿದ ನಂತರ ಐರ್ಲೆಂಡ್ ತಂಡವು 2-0 ಅಂತರದಿಂದ ಸರಣಿ ಕ್ಲೀನ್‌ ಸ್ವೀಪ್ ಸಾಧಿಸಿತ್ತು. ಎಲ್ಲ ಮಾದರಿಯ ಕ್ರಿಕೆಟ್‌ ನಲ್ಲಿ ಭಾರತ ತಂಡದ ವಿರುದ್ಧ ಐರ್ಲೆಂಡ್ ಸಾಧಿಸಿರುವ ಮೊದಲ ಸರಣಿ ಗೆಲುವು ಇದಾಗಿದೆ. ಕೆಲವೇ ದಿನಗಳ ಹಿಂದೆ ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡದ ವಿರುದ್ಧದ ಮೊದಲ ಪಂದ್ಯವನ್ನು ಐರ್ಲೆಂಡ್ ತಂಡ 34 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಗಳ ನಷ್ಟಕ್ಕೆ 154 ರನ್ ಗಳಿಸಿತು. ಪ್ರಿನ್ಸ್ ಯಾದವ್ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಹೊರತಾಗಿಯೂ ಭಾರತ ತಂಡವು 9 ವಿಕೆಟ್‌ ಗಳ ನಷ್ಟಕ್ಕೆ 153 ರನ್ ಗಳಿಸಿತ್ತು.

‘ಇಂತಹ ಆಟಗಾರರು, ಸಿಬ್ಬಂದಿ ಹಾಗೂ ಐರಿಷ್ ಕ್ರಿಕೆಟ್ ಸಮುದಾಯದೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿದ್ದು ನನ್ನ ಭಾಗ್ಯ. ಇಲ್ಲಿ ನೆಲೆಸಿದ ನಂತರ ನನ್ನ ಕುಟುಂಬ ಅದ್ಭುತ ಅನುಭವ ಪಡೆದಿದೆ. ನಾನು ಮತ್ತೊಮ್ಮೆ ಐರ್ಲೆಂಡ್ ಕ್ರಿಕೆಟ್‌ನೊಂದಿಗೆ ಕೆಲಸ ಮಾಡಲು ಬಯಸುವೆ’ ಎಂದು ಮಲಾನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮಲಾನ್ ಅವರ ಗುತ್ತಿಗೆ ಅವಧಿಯು 2027ರ ತನಕ ಇತ್ತು. ಆದರೆ 45ರ ವಯಸ್ಸಿನ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಬೇಗನೆ ಹುದ್ದೆ ತ್ಯಜಿಸಲು ನಿರ್ಧರಿಸಿದ್ದಾರೆ.

ಮುಂದಿನ ವರ್ಷ ಏಕದಿನ ವಿಶ್ವಕಪ್‌ಗೆ ಐರ್ಲೆಂಡ್ ತಂಡ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಪೂರ್ವ ತಯಾರಿಗೆ ನೂತನ ಕೋಚ್ ಕರ್ತವ್ಯ ನಿರ್ವಹಿಸಲು ಇದು ಸರಿಯಾದ ಸಮಯ ಎಂದು ಮಲಾನ್ ನಂಬಿದ್ದಾರೆ ಎಂದು ಕ್ರಿಕೆಟ್ ಐರ್ಲೆಂಡ್ ತಿಳಿಸಿದೆ.

ಮಲಾನ್ 2022ರ ಜನವರಿಯಲ್ಲಿ ಮೂರು ವರ್ಷಗಳ ಅವಧಿಗೆ ಐರ್ಲೆಂಡ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಮಲಾನ್ ಅವಧಿಯಲ್ಲಿ ಐರ್ಲೆಂಡ್ ತಂಡವು 2022, 2024 ಹಾಗೂ 2026ರಲ್ಲಿ T20 ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆದಿತ್ತು. 2022ರಲ್ಲಿ ಮೆಲ್ಬರ್ನ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಗಮನ ಸೆಳೆದಿತ್ತು.

ಐರ್ಲೆಂಡ್ ತಂಡವು ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News