FIFA World Cup 2026 | ಫ್ರಾನ್ಸ್‌ ವಿರುದ್ಧ 6–4 ಗೋಲುಗಳ ರೋಚಕ ಜಯ: ಕಂಚಿನ ಪದಕ ಗೆದ್ದ ಇಂಗ್ಲೆಂಡ್‌

1982ರ ಬಳಿಕ ವಿಶ್ವಕಪ್‌ ನಲ್ಲಿ ದಾಖಲಾದ ಅತಿ ಹೆಚ್ಚು ಗೋಲುಗಳ ಪಂದ್ಯ

Update: 2026-07-19 07:11 IST

Photo credit : X@FIFAWorldCup

ನ್ಯೂಯಾರ್ಕ್: 2026ರ FIFA ಫುಟ್‌ಬಾಲ್ ವಿಶ್ವಕಪ್‌ ನ ಮೂರನೇ ಸ್ಥಾನಕ್ಕಾಗಿ ನಡೆದ 10 ಗೋಲುಗಳ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವು ಫ್ರಾನ್ಸ್‌ ವಿರುದ್ಧ 6–4 ಅಂತರದ ಭರ್ಜರಿ ಜಯ ಸಾಧಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿತು. 1982ರ ಬಳಿಕ ವಿಶ್ವಕಪ್‌ನ ಒಂದು ಪಂದ್ಯದಲ್ಲಿ ದಾಖಲಾದ ಅತಿ ಹೆಚ್ಚು ಗೋಲುಗಳ ಪಂದ್ಯ ಎಂಬ ದಾಖಲೆಯೂ ಇದಕ್ಕೆ ಸೇರಿತು.

ಸೆಮಿಫೈನಲ್‌ ನಲ್ಲಿ ಸೋತ ಬಳಿಕ ಕಣಕ್ಕಿಳಿದಿದ್ದ ಉಭಯ ತಂಡಗಳು ಹೆಚ್ಚು ಬದಲಾವಣೆಗಳೊಂದಿಗೆ ಪಂದ್ಯ ಆರಂಭಿಸಿದ್ದವು. ಇಂಗ್ಲೆಂಡ್‌ ನಾಯಕ ಹ್ಯಾರಿ ಕೇನ್‌, ಜೂಡ್‌ ಬೆಲ್ಲಿಂಗ್ಹ್ಯಾಮ್‌ ಹಾಗೂ ಗೋಲ್‌ಕೀಪರ್‌ ಜೋರ್ಡನ್‌ ಪಿಕ್‌ಫೋರ್ಡ್‌ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಡೀನ್‌ ಹೆಂಡರ್ಸನ್‌ ಗೋಲ್‌ಕೀಪರ್‌ ಆಗಿ ಕಣಕ್ಕಿಳಿದರೆ, ಡೆಕ್ಲಾನ್‌ ರೈಸ್‌ ನಾಯಕತ್ವ ವಹಿಸಿದ್ದರು.

ಪಂದ್ಯ ಆರಂಭವಾಗಿ ಎರಡೂವರೆ ನಿಮಿಷಗಳಲ್ಲೇ ರೈಸ್‌ ಗೋಲು ದಾಖಲಿಸಿ ಇಂಗ್ಲೆಂಡ್‌ ಗೆ ಮುನ್ನಡೆ ತಂದುಕೊಟ್ಟರು. 18ನೇ ನಿಮಿಷದಲ್ಲಿ ಎಜ್ರಿ ಕೊನ್ಸಾ ಹೆಡರ್‌ ಮೂಲಕ ಎರಡನೇ ಗೋಲು ಗಳಿಸಿದರು. ಬಳಿಕ ಫ್ರಾನ್ಸ್‌ ನ ರಕ್ಷಣಾ ವಿಭಾಗವನ್ನು ಸಂಪೂರ್ಣವಾಗಿ ಭೇದಿಸಿದ ಬುಕಾಯೊ ಸಾಕಾ ಮೊದಲಾರ್ಧದಲ್ಲೇ ಎರಡು ಗೋಲುಗಳನ್ನು ಗಳಿಸಿದರು. ಇದರೊಂದಿಗೆ ವಿರಾಮದ ವೇಳೆಗೆ ಇಂಗ್ಲೆಂಡ್‌ 4–0 ಅಂತರದ ಭದ್ರ ಮುನ್ನಡೆ ಸಾಧಿಸಿತ್ತು.

ದ್ವಿತೀಯಾರ್ಧದಲ್ಲಿ ಫ್ರಾನ್ಸ್‌ ಪುಟಿದೇಳಲು ಯತ್ನಿಸಿತು. ಆರಂಭದಲ್ಲೇ ಕೈಲಿಯನ್‌ ಎಂಬಾಪೆ ಗೋಲು ಗಳಿಸಿ ಅಂತರವನ್ನು ಕಡಿಮೆ ಮಾಡಿದರು. 54ನೇ ನಿಮಿಷದಲ್ಲಿ ಬ್ರಾಡ್ಲಿ ಬಾರ್ಕೋಲಾ ಗೋಲು ದಾಖಲಿಸಿ 4–2ಕ್ಕೆ ತಂದರು. ಗೋಲು ಗಳಿಸಿದ ಬಳಿಕವೂ ಅವರು ಸಂಭ್ರಮಾಚರಣೆ ನಡೆಸಲಿಲ್ಲ. ಪಂದ್ಯದಲ್ಲಿ ಇನ್ನೂ ಸಾಕಷ್ಟು ಅವಕಾಶಗಳಿವೆ ಎಂಬ ವಿಶ್ವಾಸದಿಂದಲೇ ಅವರು ಆ ರೀತಿ ನಡೆದುಕೊಂಡರು.

66ನೇ ನಿಮಿಷದಲ್ಲಿ ಎಂಬಾಪೆ ಮತ್ತೊಮ್ಮೆ ಗೋಲು ಗಳಿಸಿ ಅಂತರವನ್ನು 4–3ಕ್ಕೆ ಇಳಿಸಿದರು. ಈ ಗೋಲಿನೊಂದಿಗೆ ಅವರು ವಿಶ್ವಕಪ್‌ ಇತಿಹಾಸದ ಸಾರ್ವಕಾಲಿಕ ಅಗ್ರ ಗೋಲುಗಾರರಾದರು. ಲಿಯೋನೆಲ್‌ ಮೆಸ್ಸಿಯ ದಾಖಲೆಯನ್ನು ಹಿಂದಿಕ್ಕಿದ ಅವರು, ಈ ಟೂರ್ನಿಯಲ್ಲಿ ತಮ್ಮ 10ನೇ ಗೋಲು ದಾಖಲಿಸಿ ಗೋಲ್ಡನ್‌ ಬೂಟ್‌ ಸ್ಪರ್ಧೆಯಲ್ಲೂ ಮುನ್ನಡೆ ಸಾಧಿಸಿದರು.

ಎಂಬಾಪೆ ಗಳಿಸಿದ ಎರಡೂ ಗೋಲುಗಳಿಗೆ ಮೈಕೆಲ್‌ ಒಲಿಸ್‌ ಸಾಥ್ ನೀಡಿದರು. ಇದರೊಂದಿಗೆ ಒಲಿಸ್‌ ವಿಶ್ವಕಪ್‌ ನಲ್ಲಿ ಒಟ್ಟು ಏಳು ಅಸಿಸ್ಟ್‌ ದಾಖಲಿಸಿ, ಪೀಲೆ ಅವರ ಸಾರ್ವಕಾಲಿಕ ದಾಖಲೆಯನ್ನು ಹಿಂದಿಕ್ಕಿದರು.

ಸಮಬಲದ ಗೋಲಿಗಾಗಿ ಫ್ರಾನ್ಸ್‌ ನಿರಂತರ ಒತ್ತಡ ಹೇರಿದ ಸಂದರ್ಭದಲ್ಲೇ 87ನೇ ನಿಮಿಷದಲ್ಲಿ ಇಂಗ್ಲೆಂಡ್‌ ಗೆ ಪೆನಾಲ್ಟಿ ಲಭಿಸಿತು. ಅದನ್ನು ಗೋಲಾಗಿ ಪರಿವರ್ತಿಸಿದ ಸಾಕಾ ಹ್ಯಾಟ್ರಿಕ್‌ ಪೂರೈಸಿ ತಂಡಕ್ಕೆ 5–3ರ ಮುನ್ನಡೆ ಒದಗಿಸಿದರು.

ಆದರೂ ಫ್ರಾನ್ಸ್‌ ಹೋರಾಟ ನಿಲ್ಲಲಿಲ್ಲ. ಹೆಚ್ಚುವರಿ ಅವಧಿಯಲ್ಲಿ ಔಸ್ಮಾನೆ ಡೆಂಬೆಲೆ ಗೋಲು ಗಳಿಸಿ ಅಂತರವನ್ನು 5–4ಕ್ಕೆ ಇಳಿಸಿದರು. ಆದರೆ ಪಂದ್ಯದ ಕೊನೆಯ ಕ್ಷಣಗಳಲ್ಲಿ ಜೂಡ್‌ ಬೆಲ್ಲಿಂಗ್ಹ್ಯಾಮ್‌ ಸುಂದರ ಗೋಲು ದಾಖಲಿಸಿ ಇಂಗ್ಲೆಂಡ್‌ ನ 6–4ರ ಗೆಲುವಿಗೆ ಮುದ್ರೆ ಒತ್ತಿದರು.

ಈ ಜಯದೊಂದಿಗೆ ಇಂಗ್ಲೆಂಡ್‌ ವಿಶ್ವಕಪ್‌ ನಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ತನ್ನದಾಗಿಸಿಕೊಂಡಿತು. 1966ರಲ್ಲಿ ವಿಶ್ವಕಪ್‌ ಪ್ರಶಸ್ತಿ ಗೆದ್ದ ಬಳಿಕ ಟೂರ್ನಿಯಲ್ಲಿ ಇಂಗ್ಲೆಂಡ್‌ ದಾಖಲಿಸಿದ ಅತ್ಯುತ್ತಮ ಸಾಧನೆ ಇದಾಗಿದೆ.

ಸಂಕ್ಷಿಪ್ತ ಸ್ಕೋರ್‌ :

ಇಂಗ್ಲೆಂಡ್‌ 6 (ಡೆಕ್ಲಾನ್‌ ರೈಸ್‌, ಎಜ್ರಿ ಕೊನ್ಸಾ, ಬುಕಾಯೊ ಸಾಕಾ–3, ಜೂಡ್‌ ಬೆಲ್ಲಿಂಗ್ಹ್ಯಾಮ್‌)

ಫ್ರಾನ್ಸ್‌ 4 (ಕೈಲಿಯನ್‌ ಎಂಬಾಪೆ–2, ಬ್ರಾಡ್ಲಿ ಬಾರ್ಕೋಲಾ, ಔಸ್ಮಾನೆ ಡೆಂಬೆಲೆ).

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News