Japan Open ಸೂಪರ್ 750 ಬ್ಯಾಡ್ಮಿಂಟನ್ | ಯಮಗುಚಿಗೆ ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದ ಪಿ.ವಿ. ಸಿಂಧು
Photo | ndtv
ಟೋಕಿಯೊ, ಜು. 19: ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು, ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನು ಮೊದಲ ಬಾರಿಗೆ ಗೆದ್ದಿದ್ದಾರೆ.
ರವಿವಾರ ನಡೆದ ಫೈನಲ್ ನಲ್ಲಿ ಆತಿಥೇಯ ಜಪಾನ್ ನ ವಿಶ್ವ ನಂ.3 ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು 21–14, 21–17 ನೇರ ಗೇಮ್ ಗಳಿಂದ ಮಣಿಸಿದ ಸಿಂಧು, ಸುಮಾರು 19 ತಿಂಗಳ ಬಳಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪಂದ್ಯದ ಆರಂಭದಲ್ಲಿ ಯಮಗುಚಿ ಮುನ್ನಡೆ ಸಾಧಿಸಿದ್ದರೂ, ಸಿಂಧು ಶೀಘ್ರವೇ ಲಯ ಕಂಡುಕೊಂಡು ಆಟದ ಮೇಲೆ ಹಿಡಿತ ಸಾಧಿಸಿದರು. ಆಕ್ರಮಣಕಾರಿ ಆಟದ ಮೂಲಕ ಮೊದಲ ಗೇಮ್ ಅನ್ನು 21–14ರಿಂದ ಗೆದ್ದ ಅವರು, ಎರಡನೇ ಗೇಮ್ ನಲ್ಲೂ ಮೇಲುಗೈ ಮುಂದುವರಿಸಿ 21–17ರಿಂದ ಜಯ ಸಾಧಿಸಿ ಚೊಚ್ಚಲ ಜಪಾನ್ ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ಡಿಸೆಂಬರ್ 2024ರಲ್ಲಿ ತವರಿನಲ್ಲಿ ನಡೆದ ಸೈಯದ್ ಮೋದಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ ಸಿಂಧು ದಾಖಲಿಸಿದ ಮೊದಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಪ್ರಶಸ್ತಿ ಇದಾಗಿದೆ. ಅಲ್ಲದೆ, ಇದು ಅವರ ವೃತ್ತಿಜೀವನದ ಮೊದಲ ಸೂಪರ್ 750 ಸರಣಿ ಪ್ರಶಸ್ತಿಯಾಗಿದೆ. 2019ರಲ್ಲಿ ವಿಶ್ವ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದ ಬಳಿಕ ಅವರು ಮುಡಿಗೇರಿಸಿಕೊಂಡ ಅತ್ಯಂತ ಮಹತ್ವದ ಪ್ರಶಸ್ತಿ ಇದಾಗಿದೆ.
ಸೆಮಿಫೈನಲ್‌ನಲ್ಲಿ ಚೀನಾದ ಚೆನ್ ಯುಫೀ ಅವರನ್ನು ಮಣಿಸಿದ್ದ 31 ವರ್ಷದ ಸಿಂಧು, ಫೈನಲ್‌ನಲ್ಲಿ ಅಕಾನೆ ಯಮಗುಚಿ ವಿರುದ್ಧ ತಮ್ಮ ವೃತ್ತಿಜೀವನದ 30ನೇ ಪಂದ್ಯವಾಡಿದರು.
ಈ ಪಂದ್ಯಕ್ಕೂ ಮುನ್ನ ಸಿಂಧು–ಯಮಗುಚಿ ನಡುವಿನ ಮುಖಾಮುಖಿ ಹಣಾಹಣಿಯಲ್ಲಿ ಸಿಂಧು 15–14ರಿಂದ ಮುನ್ನಡೆಯಲ್ಲಿದ್ದರು. ಈ ವರ್ಷದ ಆರಂಭದಲ್ಲಿ ಮಲೇಷ್ಯಾ ಓಪನ್‌ನಲ್ಲೂ ಯಮಗುಚಿ ವಿರುದ್ಧ ಸಿಂಧು ಜಯ ಸಾಧಿಸಿದ್ದರು. ಜಪಾನ್ ಓಪನ್‌ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಅವರು ಪ್ರಶಸ್ತಿ ಗೆಲ್ಲುವ ಮೂಲಕ ಯಮಗುಚಿ ವಿರುದ್ಧದ ಮುಖಾಮುಖಿ ದಾಖಲೆಯಲ್ಲಿ ತಮ್ಮ ಮುನ್ನಡೆಯನ್ನು 16–14ಕ್ಕೆ ಹೆಚ್ಚಿಸಿಕೊಂಡರು.
ಮುಂದಿನ ತಿಂಗಳು ಹೊಸದಿಲ್ಲಿಯಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ನಲ್ಲಿ ಭಾರತದ ಅಭಿಯಾನವನ್ನು ಸಿಂಧು ಮುನ್ನಡೆಸಲಿದ್ದಾರೆ.