ಮೊದಲ ಟೆಸ್ಟ್ : ಧ್ರುವ ಜುರೆಲ್, ರವೀಂದ್ರ ಜಡೇಜ, ರಾಹುಲ್ ಶತಕ
ಸುಮಾರು 9 ವರ್ಷಗಳ ನಂತರ ಸ್ವದೇಶದಲ್ಲಿ ಶತಕ ಸಿಡಿಸಿದ ಕೆ.ಎಲ್. ರಾಹುಲ್
KLರಾಹುಲ್, ರವೀಂದ್ರ ಜಡೇಜ | Photo Credit : PTI
ಅಹ್ಮದಾಬಾದ್, ಅ.3: ವಿಕೆಟ್‌ಕೀಪರ್-ಬ್ಯಾಟರ್ ಧ್ರುವ ಜುರೆಲ್(125 ರನ್, 210 ಎಸೆತ), ರವೀಂದ್ರ ಜಡೇಜ(ಔಟಾಗದೆ 104, 176 ಎಸೆತ)ಹಾಗೂ ಕೆ.ಎಲ್.ರಾಹುಲ್(100 ರನ್, 197 ಎಸೆತ)ಶತಕಗಳ ಕೊಡುಗೆಯ ಸಹಾಯದಿಂದ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡವು 5 ವಿಕೆಟ್‌ಗಳ ನಷ್ಟಕ್ಕೆ 448 ರನ್ ಕಲೆ ಹಾಕಿ 286 ರನ್ ಮುನ್ನಡೆಯೊಂದಿಗೆ ಸುಸ್ಥಿತಿಯಲ್ಲಿದೆ.
ಅನನುಭವಿ ವೆಸ್ಟ್‌ಇಂಡೀಸ್ ತಂಡದ ವಿರುದ್ಧ ಒಂದೇ ದಿನ ಆತಿಥೇಯ ತಂಡದ ಮೂವರು ಆಟಗಾರರು ಶತಕ ಸಿಡಿಸಿ ಸಂಭ್ರಮಿಸಿದರು.
ಔಟಾಗದೆ 53 ರನ್‌ನಿಂದ 2ನೇ ದಿನದಾಟವನ್ನು ಮುಂದುವರಿಸಿದ ಆರಂಭಿಕ ಬ್ಯಾಟರ್ ರಾಹುಲ್ 190 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ ಸ್ವದೇಶದಲ್ಲಿ ತನ್ನ 2ನೇ ಶತಕವನ್ನು ಪೂರೈಸಿದರು.
ನಾಯಕ ಶುಭಮನ್ ಗಿಲ್(50 ರನ್, 100 ಎಸೆತ) ಔಟಾದ ನಂತರ ಕ್ರೀಸಿಗಿಳಿದ ಧ್ರುವ ಜುರೆಲ್ 190 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್‌ಗಳ ಸಹಾಯದಿಂದ ತನ್ನ ಚೊಚ್ಚಲ ಟೆಸ್ಟ್ ಶತಕ ಗಳಿಸಿದರು. ಟೆಸ್ಟ್‌ನಲ್ಲಿ ಶತಕ ಗಳಿಸಿದ ಭಾರತದ 12ನೇ ವಿಕೆಟ್‌ಕೀಪರ್ ಎನಿಸಿಕೊಂಡರು.ಈ ಪೈಕಿ ಐವರು ಆಟಗಾರರು ವೆಸ್ಟ್‌ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಶತಕ ಗಳಿಸಿದರು. ಅವರುಗಳೆಂದರೆ: ವಿಜಯ್ ಮಾಂಜ್ರೇಕರ್, ಫಾರೂಕ್ ಇಂಜಿನಿಯರ್, ಅಜಯ್ ರಾತ್ರಾ, ವೃದ್ದಿಮಾನ್ ಸಹಾ ಹಾಗೂ ಇದೀಗ ಜುರೆಲ್.
ರವೀಂದ್ರ ಜಡೇಜ ಸ್ಪಿನ್ನರ್‌ಗಳ ಮೇಲೆ ಮುಗಿಬಿದ್ದು ತನ್ನ 6ನೇ ಶತಕವನ್ನು ಸಿಡಿಸಿ ಮಿಂಚಿದರು.
ಸತತ ಎಸೆತದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿದ ಜುರೆಲ್ ಅವರು ಜಡೇಜ ಅವರೊಂದಿಗೆ 5ನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟ(206) ಪೂರೈಸಿದರು.
ವೆಸ್ಟ್‌ಇಂಡೀಸ್ ತಂಡವು ಶಿಸ್ತುಬದ್ಧ ಬೌಲಿಂಗ್ ಮಾಡಲು ಯತ್ನಿಸಿದರೂ ಆತಿಥೇಯರ ಪ್ರಾಬಲ್ಯವನ್ನು ಹತ್ತಿಕ್ಕುವಲ್ಲಿ ವಿಫಲವಾಯಿತು. ಭಾರತ ತಂಡವು ಮೂರು ಶತಕಗಳನ್ನು ಸಿಡಿಸಿ 400ಕ್ಕೂ ಅಧಿಕ ರನ್ ಗಳಿಸಿದ್ದು, ಇನ್ನಷ್ಟು ರನ್ ರಾಶಿ ಹಾಕುವ ವಿಶ್ವಾಸದಲ್ಲಿದೆ.
1979, 1986 ಹಾಗೂ 2007ರ ನಂತರ ಕ್ಯಾಲೆಂಡರ್ ವರ್ಷದಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಭಾರತದ ಮೂವರು ಅಥವಾ ಅದಕ್ಕಿಂತ ಹೆಚ್ಚು ಬ್ಯಾಟರ್‌ಗಳು ಶತಕಗಳನ್ನು ಗಳಿಸಿದ್ದು, ಇದು ನಾಲ್ಕನೇ ದೃಷ್ಟಾಂತ.
ಈ ವರ್ಷ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯಶಸ್ವಿ ಜೈಸ್ವಾಲ್, ಗಿಲ್ ಹಾಗೂ ರಿಷಭ್ ಪಂತ್, ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಿಲ್, ಜಡೇಜ ಹಾಗೂ ಸುಂದರ್, ಅಹ್ಮದಾಬಾದ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ್ದ ರಾಹುಲ್, ಜುರೆಲ್ ಹಾಗೂ ಜಡೇಜ ಈ ಸಾಧನೆ ಮಾಡಿದ್ದಾರೆ.
ಸುಮಾರು 9 ವರ್ಷಗಳ ನಂತರ ಸ್ವದೇಶದಲ್ಲಿ ಶತಕ ಸಿಡಿಸಿದ ಕೆ.ಎಲ್. ರಾಹುಲ್
ಭಾರತದ ಬಲಗೈ ಬ್ಯಾಟರ್ ಕೆ.ಎಲ್.ರಾಹುಲ್ ತನ್ನ 11ನೇ ಟೆಸ್ಟ್ ಶತಕ ಬಾರಿಸಿದರು. ಈ ಮೂಲಕ ಸುಮಾರು 9 ವರ್ಷಗಳ ನಂತರ(3211 ದಿನಗಳು)ಸ್ವದೇಶದಲ್ಲಿ ಮೊದಲ ಶತಕ ಸಿಡಿಸಿ ಮಿಂಚಿದರು.
ರೋಸ್ಟನ್ ಚೇಸ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದ ರಾಹುಲ್ ಮೂರಂಕೆಯನ್ನು ತಲುಪಿದ್ದಲ್ಲದೆ, 2016ರಿಂದ ಸ್ವದೇಶದಲ್ಲಿ ಎದುರಿಸುತ್ತಿದ್ದ ಶತಕದ ಬರವನ್ನು ನೀಗಿಸಿಕೊಂಡರು. ಚೆನ್ನೈನಲ್ಲಿ ಕರುಣ್ ನಾಯರ್ ತ್ರಿಶತಕ ಗಳಿಸಿದ್ದಾಗ ರಾಹುಲ್ ಕೂಡ ಭಾರತದ ಪರ ಕೊನೆಯ ಬಾರಿ ಶತಕ ಗಳಿಸಿದ್ದರು.
ಶತಕ ಗಳಿಸಿದ ನಂತರ ತನ್ನ ಬ್ಯಾಟನ್ನು ಎತ್ತಿದ ರಾಹುಲ್, ಹೆಲ್ಮೆಟ್ ಅನ್ನು ತೆಗೆದು ಭಾರತೀಯ ಬ್ಯಾಡ್ಜ್‌ಗೆ ಮುತ್ತಿಟ್ಟರು. ತನ್ನ ಮಧ್ಯ ಹಾಗೂ ಉಂಗುರ ಬೆರಳನ್ನು ಬಾಯಿಗಿಟ್ಟು ವಿಶಿಷ್ಟವಾಗಿ ಸಂಭ್ರಮಿಸಿದರು.
ಈ ವಿಭಿನ್ನ ಸಂಭ್ರಮಾಚರಣೆಯ ಮೂಲಕ ತನ್ನ ಶತಕವನ್ನು ಮಾರ್ಚ್‌ನಲ್ಲಿ ಜನಿಸಿದ್ದ ತನ್ನ ಹೆಣ್ಣುಮಗುವಿಗೆ ಅರ್ಪಿಸಿದರು.
ಸ್ವದೇಶದಲ್ಲಿ ಎರಡು ಟೆಸ್ಟ್ ಶತಕಗಳ ನಡುವೆ ಅತ್ಯಂತ ಹೆಚ್ಚು ಇನಿಂಗ್ಸ್(26)ಆಡಿದ ಭಾರತೀಯರ ಅಪರೂಪದ ಪಟ್ಟಿಗೆ ರಾಹುಲ್ ಸೇರ್ಪಡೆಯಾದರು. ಲೆಜೆಂಡ್‌ಗಳಾದ ಕಪಿಲ್‌ದೇವ್, ಪಾಲಿ ಉಮ್ರಿಗರ್, ಅಜಿಂಕ್ಯ ರಹಾನೆ ಹಾಗೂ ವಿಜಯ ಮಾಂಜ್ರೇಕರ್ ಅವರೊಂದಿಗೆ ಸೇರಿಕೊಂಡರು.
ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಗಳಿಸಿದ ಭಾರತದ 5ನೇ ಬ್ಯಾಟರ್ ಜುರೆಲ್
ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಧ್ರುವ ಜುರೆಲ್ ವೆಸ್ಟ್‌ಇಂಡೀಸ್ ತಂಡದ ವಿರುದ್ಧ ಅಹ್ಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ತನ್ನ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸುವ ಮೂಲಕ ಸ್ಮರಣೀಯ ಮೈಲಿಗಲ್ಲು ತಲುಪಿದರು.
ತನ್ನ 6ನೇ ಟೆಸ್ಟ್ ಪಂದ್ಯವನ್ನು ಆಡಿದ ಜುರೆಲ್ ವಿಂಡೀಸ್ ನಾಯಕ ರೋಸ್ಟನ್ ಚೇಸ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿ 190 ಎಸೆತಗಳಲ್ಲಿ ಶತಕ ಪೂರೈಇಸಿದರು. ಜುರೆಲ್ ಇನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ಗಳಿವೆ. ಈ ಇನಿಂಗ್ಸ್ ಮೂಲಕ ತನ್ನ ತಾಳ್ಮೆ, ತಂತ್ರಗಾರಿಕೆ ಹಾಗೂ ಆಕ್ರಮಣಕಾರಿತನ ತೋರ್ಪಡಿಸಿದರು. ಜುರೆಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 2ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧ 90 ರನ್ ಗಳಿಸಿದ್ದರು.
ಜುರೆಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಭಾರತದ 12ನೇ ವಿಕೆಟ್‌ಕೀಪರ್ ಎನಿಸಿಕೊಂಡಿದ್ದು, ವೆಸ್ಟ್‌ಇಂಡೀಸ್ ವಿರುದ್ಧ್ದ ಚೊಚ್ಚಲ ಶತಕ ದಾಖಲಿಸಿದ ಭಾರತದ 5ನೇ ಬ್ಯಾಟರ್ ಎನಿಸಿಕೊಂಡರು. ವಿಜಯ ಮಾಂಜ್ರೇಕರ್, ಫಾರೂಕ್ ಇಂಜಿನಿಯರ್, ಅಜಯ್ ರಾತ್ರಾ ಹಾಗೂ ವೃದ್ಧಿಮಾನ್ ಸಹಾ ಅವರನ್ನೊಳಗೊಂಡ ಪಟ್ಟಿಗೆ ಸೇರಿದರು.
ಜುರೆಲ್ 2025ರಲ್ಲಿ ಶತಕ ಗಳಿಸಿದ ಭಾರತದ ಮೂರನೇ ನಿಯೋಜಿತ ವಿಕೆಟ್‌ಕೀಪರ್ ಆಗಿದ್ದಾರೆ. ರಿಷಭ್ ಪಂತ್ ಕ್ಯಾಲೆಂಡರ್ ವರ್ಷದಲ್ಲಿ ಎರಡು ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.
ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೇವಲ 10 ರನ್‌ನಿಂದ ಶತಕ ವಂಚಿತರಾಗಿದ್ದ ಯುವ ಬ್ಯಾಟರ್ ಜುರೆಲ್ ಇಂದು ಶತಕ ಗಳಿಸಿದ ತಕ್ಷಣ ರವೀಂದ್ರ ಜಡೇಜ ಬೆನ್ನು ತಟ್ಟಿ ಅಭಿನಂದಿಸಿದರು.