ಟಿ20 ವಿಶ್ವಕಪ್ ವಿವಾದ: ಬಾಂಗ್ಲಾ ಕ್ರಿಕೆಟ್‌ಗೆ ಆರ್ಥಿಕ ಸಂಕಷ್ಟ ಭೀತಿ
PC: x.com/PKohliReturns
ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟಮೊದಲ ಟೆಸ್ಟ್ ಶತಕ ದಾಖಲಿಸಿದ ಸಾಧನೆಯ ಮೂಲಕ 25 ವರ್ಷಗಳ ಹಿಂದೆ ದೇಶದ ಮನೆಮಾತಾಗಿದ್ದ ಅಮಿನುಲ್ ಇಸ್ಲಾಂ ಬುಲ್ಬುಲ್, ತಮ್ಮ ಅಧಿಕಾರಾವಧಿಯಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ ಅದು ಋಣಾತ್ಮಕ ಪರಿಣಾಮಗಳನ್ನು ಹೊಂದಿರಲಿದೆ ಎಂಬ ಸುಳಿವು ನೀಡಿದ್ದು, ಜಾಗತಿಕ ಮಟ್ಟದ ಟೂರ್ನಿಯಿಂದ ತಮ್ಮ ಅವಧಿಯಲ್ಲಿ ರಾಷ್ಟ್ರೀಯ ತಂಡ ಹೊರಗುಳಿಯುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರದ ಘನತೆ ಹಾಗೂ ಭದ್ರತಾ ಆತಂಕಗಳ ಹಿನ್ನೆಲೆಯಲ್ಲಿ ಸರ್ಕಾರದ ಕ್ರೀಡಾ ಸಲಹೆಗಾರ ಆಸೀಪ್ ನಝ್ರುಲ್ ಅವರ ಬಿಗಿ ನಿಲುವಿನಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ.
ಈ ಟೂರ್ನಿಯಲ್ಲಿ ಬಾಂಗ್ಲಾದೇಶ ಭಾಗವಹಿಸದೇ ಇದ್ದಲ್ಲಿ ಗಂಭೀರ ಹಣಕಾಸು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ), ಆಟಗಾರರು ಹಾಗೂ ಟೂರ್ನಿಯ ವಾಣಿಜ್ಯ ಸಂರಚನೆ ಮೇಲೆಯೂ ಬೀರುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಭಾಗವಹಿಸಿದರೆ ಬಾಂಗ್ಲಾದೇಶ ಸುಮಾರು 3 ಲಕ್ಷ ಡಾಲರ್ ಆದಾಯ ಗಳಿಸಲಿದೆ. 12 ಅಗ್ರ ತಂಡಗಳ ಪೈಕಿ ಒಂದಾಗಿ ಹೊರಹೊಮ್ಮಿದಲ್ಲಿ ಈ ಆದಾಯ 4.5 ಲಕ್ಷ ಡಾಲರ್‌ವರೆಗೆ ಏರಲಿದೆ.
ಆದರೆ ಟೂರ್ನಿಯಿಂದ ಬಾಂಗ್ಲಾದೇಶ ಹಿಂದೆ ಸರಿದಲ್ಲಿ, ಐಸಿಸಿ ವಾರ್ಷಿಕವಾಗಿ ನೀಡುವ 27 ದಶಲಕ್ಷ ಡಾಲರ್ ಮೊತ್ತವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ಪ್ರಸಾರ ಹಾಗೂ ಪ್ರಾಯೋಜಕತ್ವ ಆದಾಯಕ್ಕೂ ಭಾರೀ ಕತ್ತರಿ ಬೀಳಲಿದೆ. ಅಂದಾಜಿನ ಪ್ರಕಾರ, ಮಂಡಳಿಯ ವಾರ್ಷಿಕ ಆದಾಯದ ಶೇಕಡಾ 60ರಷ್ಟು ಪಾಲು ನಷ್ಟವಾಗುವ ಸಾಧ್ಯತೆ ಇದೆ.
ಇದಕ್ಕೂ ಜೊತೆಗೆ, ಮುಂದಿನ ಆಗಸ್ಟ್–ಸೆಪ್ಟೆಂಬರ್‌ನಲ್ಲಿ ಭಾರತ ತಂಡದ ಬಾಂಗ್ಲಾದೇಶ ಪ್ರವಾಸವೂ ರದ್ದಾಗುವ ಸಾಧ್ಯತೆ ಇದೆ. ಈ ದ್ವಿಪಕ್ಷೀಯ ಸರಣಿಯ ಟೆಲಿವಿಷನ್ ಪ್ರಸಾರದ ಹಕ್ಕುಗಳ ಮೌಲ್ಯವು ಇತರ 10 ದ್ವಿಪಕ್ಷೀಯ ಸರಣಿಗಳ ಪ್ರಸಾರ ಹಕ್ಕಿನ ಮೌಲ್ಯಕ್ಕೆ ಸಮಾನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಫೆಬ್ರವರಿ 12ರಂದು ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಹೊಸ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಆಸೀಪ್ ನಝ್ರುಲ್ ಅವರ ಪ್ರಭಾವ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ, ಬುಲ್ಬುಲ್ ಅವರ ಅವಧಿಯಲ್ಲಿ ಬಿಸಿಬಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು ಎಂಬ ಕಪ್ಪುಚುಕ್ಕೆ ಉಳಿಯಲಿದೆ. ಈ ಪರಿಸ್ಥಿತಿಯಲ್ಲಿ ಆಟಗಾರರೇ ಹೆಚ್ಚಿನ ನಷ್ಟ ಅನುಭವಿಸಲಿದ್ದು, ಜಾಗತಿಕ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶವನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ.