T20 ವಿಶ್ವಕಪ್ 2026 | ಬಾಂಗ್ಲಾದೇಶದ ಬದಲು ಸ್ಕಾಟ್‌ಲ್ಯಾಂಡ್ ತಂಡ ಸೇರ್ಪಡೆ: ಬಿಸಿಬಿಗೆ ಐಸಿಸಿಯ ಅಧಿಕೃತ ಮಾಹಿತಿ
PC : icc-cricket.com
ಹೊಸದಿಲ್ಲಿ: ಮುಂಬರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಭಾರತಕ್ಕೆ ಪ್ರಯಾಣ ಬೆಳೆಸಲು ಬಾಂಗ್ಲಾದೇಶ ಕ್ರಿಕೆಟ್ ತಂಡ ನಿರಾಕರಿಸಿದ ಹಿನ್ನೆಲೆಯಲ್ಲಿ, ಅದರ ಸ್ಥಾನದಲ್ಲಿ ಸ್ಕಾಟ್‌ಲ್ಯಾಂಡ್ ತಂಡವನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಅಧಿಕೃತವಾಗಿ ಮಾಹಿತಿ ರವಾನಿಸಿದೆ.
ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರಹ್ಮಾನ್ ಅವರನ್ನು ಐಪಿಎಲ್ ನಿಂದ ಕೈಬಿಟ್ಟ ಬಳಿಕ, ಭದ್ರತಾ ಕಳವಳವನ್ನು ಮುಂದಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಪಟ್ಟು ಹಿಡಿದಿತ್ತು.
ಶನಿವಾರ ದುಬೈನಲ್ಲಿ ಇದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಯ್ ಶಾ ಸೇರಿದಂತೆ ಹಿರಿಯ ಅಧಿಕಾರಿಗಳು, ಜಾಗತಿಕ ಕ್ರಿಕೆಟ್ ಸಂಸ್ಥೆಯಾದ ಐಸಿಸಿಯ ನಿರ್ಧಾರವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮೀನುಲ್ ಇಸ್ಲಾಂ ಬುಲ್ಬುಲ್ ಅವರಿಗೆ ಇಮೇಲ್ ಮೂಲಕ ತಿಳಿಸಿರುವುದಾಗಿ ವರದಿಯಾಗಿದೆ.
“ಅವರು ಭಾರತಕ್ಕೆ ಪ್ರಯಾಣಿಸಲು ಬಯಸುವರೇ ಎಂಬ ಕುರಿತು ನಿರ್ಧರಿಸಲು ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ 24 ಗಂಟೆಗಳ ಗಡುವು ವಿಧಿಸಿತ್ತು. ಆದರೆ, ಅವರು ಅದಕ್ಕೆ ಪ್ರತಿಕ್ರಿಯಿಸದೇ ಹೋದ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಿಗೆ ಇಮೇಲ್ ರವಾನಿಸುವ ಮೂಲಕ ನಮ್ಮ ನಿರ್ಧಾರವನ್ನು ತಿಳಿಸಲಾಗಿದೆ” ಎಂದು ಹೆಸರೇಳಲು ಇಚ್ಛಿಸದ ಐಸಿಸಿ ಮೂಲವೊಂದು ತಿಳಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಐಸಿಸಿಗೆ ತಿಳಿಸುವುದಕ್ಕೂ ಮುನ್ನವೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಢಾಕಾದಲ್ಲಿ ಪತ್ರಿಕಾಗೋಷ್ಠಿ ನಡೆಸಿತು. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ನಿಮ್ಮ ಬದಲಿಗೆ ಬೇರೆ ತಂಡವನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ” ಎಂದೂ ಮೂಲಗಳು ತಿಳಿಸಿವೆ.
ಐಸಿಸಿ ಪದೇಪದೇ ಭರವಸೆ ನೀಡಿದರೂ, ಬಾಂಗ್ಲಾದೇಶದ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ನಝ್ರುಲ್ ಅವರು ಭದ್ರತಾ ಕಳವಳವನ್ನು ಉಲ್ಲೇಖಿಸಿ, ಭಾರತಕ್ಕೆ ಪ್ರಯಾಣ ಬೆಳೆಸದಂತೆ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸಲಹೆ ನೀಡಿದ್ದರು.