×
Ad

ಇಶಾನ್ ಕಿಶನ್ ವಿರುದ್ಧ ಸಿಟ್ಟಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಸೂರ್ಯಕುಮಾರ್ ಯಾದವ್!

Update: 2026-01-24 12:58 IST

Photo credit: PTI

ರಾಯ್ಪುರ್: ಇಲ್ಲಿನ ಶಹೀದ್ ವೀರ್ ನಾರಾಯಣ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಝಿಲೆಂಡ್ ವಿರುದ್ಧದ ಎರಡನೆ ಟಿ-20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ರನ್ನು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮನಸಾರೆ ಕೊಂಡಾಡಿದ್ದಾರೆ. ಇದೇ ವೇಳೆ, ಪವರ್ ಪ್ಲೇ ಅವಧಿಯಲ್ಲಿ ನನಗೆ ಬ್ಯಾಟಿಂಗ್ ಗೆ ಅವಕಾಶ ನೀಡದೆ ಇದ್ದುದರಿಂದ, ನಾನು ಇಶಾನ್ ಕಿಶನ್ ಮೇಲೆ ಸಿಟ್ಟಾಗಿದ್ದೆ ಎಂಬ ಸಂಗತಿಯನ್ನು ಸೂರ್ಯಕುಮಾರ್ ಯಾದವ್ ಒಪ್ಪಿಕೊಂಡಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನ್ಯೂಝಿಲೆಂಡ್ ತಂಡ, ನಿಗದಿತ 20 ಓವರ್ ಗಳಲ್ಲಿ 208 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ, ಕೇವಲ 6 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್, ನ್ಯೂಝಿಲೆಂಡ್ ಬೌಲರ್ ಗಳನ್ನು ಕಂಗೆಡಿಸಿದರು. ಕೇವಲ 32 ಬಾಲ್ ಗಳಲ್ಲಿ 76 ರನ್ ಸಿಡಿಸಿದ ಇಶಾನ್ ಕಿಶನ್, ಪಂದ್ಯವನ್ನು ನ್ಯೂಝಿಲೆಂಡ್ ಹಿಡಿತದಿಂದ ಕಿತ್ತುಕೊಂಡರು. ಇದಲ್ಲದೆ, ಸೂರ್ಯಕುಮಾರ್ ಯಾದವ್ ಅವರೊಂದಿಗಿನ ಜೊತೆಯಾಟದಲ್ಲಿ ಕೇವಲ ಎಂಟು ಓವರ್ ಗಳಲ್ಲಿ 122 ರನ್ ಗಳಿಸುವ ಮೂಲಕ ಪಂದ್ಯಕ್ಕೆ ದೊಡ್ಡ ತಿರುವು ನೀಡಿದರು.

ಪಂದ್ಯ ಮುಕ್ತಾಯಗೊಂಡ ಬಳಿಕ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸೂರ್ಯಕುಮಾರ್ ಯಾದವ್, “ಮಧ್ಯಾಹ್ನ ಇಶಾನ್ ಕಿಶನ್ ಊಟ ಮಾಡಿದ್ದರೋ ಇಲ್ಲವೊ ನನಗೆ ತಿಳಿಯದು. ಆದರೆ, ಬ್ಯಾಟಿಂಗ್ ಮಾಡುತ್ತಿರುವ ತಂಡವೊಂದು ಕೇವಲ 6 ರನ್ ಗೆ 2 ವಿಕೆಟ್ ಕಳೆದುಕೊಂಡ ಬಳಿಕ, ಪವರ್ ಪ್ಲೇನಲ್ಲಿ 60 ಚಿಲ್ಲರೆ ರನ್ ಗಳಿಸಿದ್ದನ್ನು ನಾನಂತೂ ಎಂದೂ ನೋಡಿಲ್ಲ. ಆದರೆ, ನಮ್ಮ ಬ್ಯಾಟರ್ ಗಳು ಇದೇ ರೀತಿ ಆಡಬೇಕಿದೆ. ಆತ ನನಗೆ ಪವರ್ ಪ್ಲೇನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡದೆ ಇದ್ದುದರಿಂದ ಕೋಪಗೊಂಡಿದ್ದೆ. ಆದರೆ, ನಾನು ಸಿಟ್ಟನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾದೆ” ಎಂದು ಲಘು ಹಾಸ್ಯದ ಧಾಟಿಯಲ್ಲಿ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News