ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್-11 ತಂಡದಲ್ಲಿ ನಾಲ್ವರು ಭಾರತೀಯರಿಗೆ ಸ್ಥಾನ
PC: x.com/IMManu_18
ಸಿಡ್ನಿ: ಟೆಸ್ಟ್ ಕ್ರಿಕೆಟ್ ನಲ್ಲಿ ಹಲವು ಪ್ರಮುಖ ಕ್ಷಣಗಳಿಗೆ 2025 ಸಾಕ್ಷಿಯಾಗಿದೆ. ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಬಗ್ಗುಬಡಿದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆದ್ದಿದೆ. ಬಳಿಕ ಭಾರತದ ವಿರುದ್ಧ ತವರು ನೆಲದಲ್ಲೇ ಕ್ಲೀನ್ ಸ್ವೀಪ್ ಸಾಧಿಸಿತು. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ರನ್ ಹೊಳೆ ಹರಿಯಿತು. ಆ್ಯಷಸ್ ಸರಣಿಯನ್ನು ಆಸ್ಟ್ರೇಲಿಯಾ 3-1 ಅಂತರದಿಂದ ಗೆದ್ದಿತು.
ಏತನ್ಮಧ್ಯೆ 2025ರಲ್ಲಿ ಹಲವು ಮಂದಿ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ತಂಡ ತನ್ನ ಟೆಸ್ಟ್ 11 ತಂಡವನ್ನು ಪ್ರಕಟಿಸಿದೆ. ವರ್ಷದಲ್ಲಿ 11 ಟೆಸ್ಟ್ ಗೆದ್ದಿರುವ ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಈ ತಂಡದಲ್ಲಿ ಸೇರಿದ್ದಾರೆ. ಅಂತೆಯೇ ರವೀಂದ್ರ ಜಡೇಜಾ 12ನೇ ಆಟಗಾರನಾಗಿ ಸ್ಥಾನ ಪಡೆಯುವ ಮೂಲಕ ನಾಲ್ವರು ಭಾರತೀಯರು ಕೂಡಾ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದ ತಲಾ ಇಬ್ಬರು ತಂಡದಲ್ಲಿದ್ದಾರೆ.
ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರರೆಂದರೆ ಶುಭ್ಮನ್ ಗಿಲ್, ಕೆ.ಎಲ್.ರಾಹುಲ್ ಹಾಗೂ ಜಸ್ಪ್ರೀತ್ ಬೂಮ್ರಾ. ಆಡುವ 11ರಲ್ಲಿ ಸ್ಥಾನ ಪಡೆಯುವ ಅವಕಾಶದಿಂದ ವಂಚಿತರಾಗಿರುವ ಜಡೇಜಾ ಅವರ ಸ್ಥಾನವನ್ನು ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಕಸಿದುಕೊಂಡಿದ್ದಾರೆ.
ಗಿಲ್ 2025ರಲ್ಲಿ 16 ಇನಿಂಗ್ಸ್ ಗಳಿಂದ 983 ರನ್ ಗಳಿಸಿದ್ದು, ರಾಹುಲ್ 19 ಇನ್ನಿಂಗ್ಸ್ ಗಳಲ್ಲಿ 813 ರನ್ ಗಳಿಸಿದ್ದಾರೆ. ಬೂಮ್ರಾ 14 ಇನ್ನಿಂಗ್ಸ್ ಗಳಲ್ಲಿ 31 ವಿಕೆಟ್ ಕಿತ್ತಿದ್ದಾರೆ. ನಾಯಕರಾಗಿ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವೂಮಾ ಆಯ್ಕೆಯಾಗಿದ್ದಾರೆ. ಭಾರತದ ವಿರುದ್ಧ ಗಣನೀಯ ಪ್ರದರ್ಶನ ನೀಡಿದ ಸೈಮನ್ ಹರ್ಮರ್ ತಂಡದಲ್ಲಿ ಸ್ಥಾನ ಪಡೆದ ಮತ್ತೊಬ್ಬ ಆಫ್ರಿಕನ್ ಆಟಗಾರ.