×
Ad

ಗುವಾಹತಿ ಟೆಸ್ಟ್: ಗಿಲ್ ಆಡುವ ಬಗ್ಗೆ ಅನುಮಾನ; ನಿತೀಶ್ ಕುಮಾರ್ ರೆಡ್ಡಿಗೆ ಬುಲಾವ್

Update: 2025-11-18 08:20 IST

 PC: x.com/nikun 

ಗುವಾಹತಿ: ಕತ್ತು ನೋವಿನಿಂದ ಬಳಲುತ್ತಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭ್‌ಮನ್ ಗಿಲ್, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಆಡುವ ಬಗ್ಗೆ ಅನುಮಾನಗಳು ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ರೆಡ್ಡಿಯವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಈಡನ್ ಗಾರ್ಡನ್ಸ್ ಟೆಸ್ಟ್ ಗೆ ಮುನ್ನ ರೆಡ್ಡಿಯವರನ್ನು ತಂಡದಿಂದ ಬಿಡುಗಡೆ ಮಾಡಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಿದ ಭಾರತ ಎ ತಂಡದಲ್ಲಿ ಆಡುವಂತೆ ಸೂಚಿಸಲಾಗಿತ್ತು. ರೆಡ್ಡಿ ಎರಡನೇ ಟೆಸ್ಟ್ ವೇಳೆಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದ್ದರೂ, ಇದೀಗ ತಕ್ಷಣವೇ ವಾಪಸ್ಸಾಗುವಂತೆ ಬುಲಾವ್ ನೀಡಿದೆ. ನ. 18ರಂದ ಈಡನ್ ಗಾರ್ಡನ್ಸ್ ನಲ್ಲಿ ನಡೆಯುವ ಐಚ್ಛಿಕ ಸೆಷನ್ ನಲ್ಲಿ ತಂಡದೊಂದಿಗೆ ರೆಡ್ಡಿ ತರಬೇತಿ ಪಡೆಯಲಿದ್ದಾರೆ.

ಭಾರತ ಎ ತಂಡದ ಪರ ಮೊದಲ ಟೆಸ್ಟ್ ಆಡಿದ್ದ ರೆಡ್ಡಿ 37 ರನ್ ಗಳಿಸಿದ್ದಲ್ಲದೇ 18 ರನ್ ಗೆ 1 ವಿಕೆಟ್ ಕಿತ್ತಿದ್ದರು. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಗೆ ಅವಕಾಶ ಪಡೆಯಲಿಲ್ಲ. ಟೆಸ್ಟ್ ತಂಡಕ್ಕೆ ಮರಳುವ ಹಿನ್ನೆಲೆಯಲ್ಲಿ ಈ ಆಲ್ರೌಂಡರ್, ನ. 19ರಿಂದ ಆರಂಭವಾಗುವ ಭಾರತ ಎ ತಂಡದ ಮೂರನೇ ಟೆಸ್ಟ್ ಪಂದ್ಯವನ್ನೂ ತಪ್ಪಿಸಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಆಡಲು ಗಿಲ್ ಫಿಟ್ ಆಗದಿದ್ದ ಪಕ್ಷದಲ್ಲಿ ಬ್ಯಾಟಿಂಗ್ ಬಲಪಡಿಸುವುದು ಭಾರತಕ್ಕೆ ಅಗತ್ಯವಾಗಿದೆ. ಕುತ್ತಿಗೆ ಗಾಯದಿಂದ ಭಾರತ ತಂಡದ ನಾಯಕ ಚೇತರಿಸಿಕೊಳ್ಳುತ್ತಿದ್ದರೂ, ಅವರು ಆಡುವುದು ಇನ್ನೂ ಸಂದೇಹಾಸ್ಪದವಾಗಿಯೇ ಉಳಿದಿದೆ. ದೇವದತ್ ಪಡಿಕ್ಕಲ್ ಹಾಗೂ ಸಾಯಿ ಸುದರ್ಶನ್ ಅವರ ಆಯ್ಕೆ ಸಾಧ್ಯತೆಯನ್ನೂ ತಂಡ ಪರಿಶೀಲಿಸುತ್ತಿದೆ.

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ರೆಡ್ಡಿ ಸೂಕ್ತ ಆಯ್ಕೆಯಾಗಬಲ್ಲರು; ಇದು ಎಡ-ಬಲ ಬ್ಯಾಟಿಂಗ್ ಸರದಿಯನ್ನು ಹೊಂದಲು ಅವಕಾಶ ಮಾಡಿಕೊಡುತ್ತದೆ ಎನ್ನುವುದು ಲೆಕ್ಖಾಚಾರ. ಮೊದಲ ಟೆಸ್ಟ್ ಮೂರೇ ದಿನಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್ ನತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಕೊನೆ ಪಂದ್ಯವನ್ನು ಗೆದ್ದು ಸರಣಿಯನ್ನು 1-1 ಸಮಬಲ ಮಾಡಿಕೊಳ್ಳುವ ವಿಶ್ವಾಸದಲ್ಲಿ ಭಾರತ ತಂಡ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News