ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ರೆಫರಿಯ ಕಳಪೆ ತೀರ್ಪು | ಐತಿಹಾಸಿಕ ಸಾಧನೆಯಿಂದ ವಂಚಿತವಾದ ಭಾರತ
Image Credit: X/@IndianFootball
https://www.varthabharati.in/national/qatar-controversial-goal-against-india-aiff-asks-for-probe-2014253
ದೋಹಾ (ಖತರ್): ರೆಫರಿಯ ಕಳಪೆ ತೀರ್ಪಿನಿಂದಾಗಿ ಫಿಫಾ ಫುಟ್ಬಾಲ್ ವಿಶ್ವಕಪ್ನ ಮೂರನೇ ಅರ್ಹತಾ ಸುತ್ತಿಗೆ ತೇರ್ಗಡೆಗೊಳ್ಳುವ ಐತಿಹಾಸಿಕ ಅವಕಾಶದಿಂದ ಭಾರತ ವಂಚಿತವಾಗಿದೆ. ಮಂಗಳವಾರ ದೋಹಾದಲ್ಲಿ ನಡೆದ ಎರಡನೇ ಸುತ್ತಿನ ಅರ್ಹತಾ ಪಂದ್ಯವೊಂದರಲ್ಲಿ ಆತಿಥೇಯ, ಏಶ್ಯನ್ ಚಾಂಪಿಯನ್ ಖತರ್ ತಂಡವು ವಿವಾದಾಸ್ಪದ ಗೋಲೊಂದರ ನೆರವಿನಿಂದ ಭಾರತವನ್ನು 2-1 ಗೋಲುಗಳಿಂದ ಸೋಲಿಸಿದೆ.
ಲಲಿಯನ್ಝುವಲ ಛಾಂಗ್ಟೆ 37ನೇ ನಿಮಿಷದಲ್ಲಿ ಗೋಲು ಬಾರಿಸಿದ ಬಳಿಕ, ಭಾರತವು ಮುನ್ನಡೆಯಲ್ಲಿತ್ತು. ಆದರೆ, 73ನೇ ನಿಮಿಷದಲ್ಲಿ ಭಾರತಕ್ಕೆ ದುರಂತ ಕಾದಿತ್ತು. ಆಗ ಖತರ್ನ ಯೂಸುಫ್ ಐಮನ್, ಬಹುತೇಕ ತಟಸ್ಥವಾಗಿದ್ದ ಚೆಂಡಿಗೆ ಮತ್ತೆ ಚಾಲನೆ ನೀಡಿ ಅದನ್ನು ಗೋಲುಪೆಟ್ಟಿಗೆಯೊಳಗೆ ಬಾರಿಸಿದರು ಮತ್ತು ಅದು ಸಕ್ರಮ ಗೋಲು ಎಂಬುದಾಗಿ ರೆಫರಿ ಮಾನ್ಯ ಮಾಡಿದರು.
ಈ ವಿವಾದಾತ್ಮಕ ಗೋಲಿನಿಂದಾಗಿ ಆತಿಥೇಯ ಖತರ್ ತನ್ನ ಅಂಕವನ್ನು 1-1 ರಿಂದ ಸಮಗೊಳಿಸಿತು. ಆ ಬಳಿಕ ಪಂದ್ಯದ ಗತಿಯೇ ಬದಲಾಯಿತು. 85ನೇ ನಿಮಿಷದಲ್ಲಿ ಖತರ್ನ ಅಹ್ಮದ್ ಅಲ್-ರಾವಿ ತಂಡದ ಎರಡನೇ ಗೋಲನ್ನು ಬಾರಿಸಿದರು.
ಇದಕ್ಕೂ ಮೊದಲು, ಫಿಫಾ ವಿಶ್ವಕಪ್ ಪಂದ್ಯಾವಳಿಯೊಂದರ ಮೂರನೇ ಅರ್ಹತಾ ಸುತ್ತು ಪ್ರವೇಶಿಸುವ ಮೂಲಕ ಇತಿಹಾಸವನ್ನು ನಿರ್ಮಿಸುವ ಸನಿಹಕ್ಕೆ ಭಾರತ ಬಂದಿತ್ತು. ಮಧ್ಯಾಂತರದ ವೇಳೆಗೆ ಭಾರತವು 1-0 ಗೋಲಿನಿಂದ ಮುಂದಿತ್ತು ಹಾಗೂ ದಿನದ ಇನ್ನೊಂದು ಪಂದ್ಯದಲ್ಲಿ ಕುವೈತ್ ಮತ್ತು ಅಫ್ಘಾನಿಸ್ತಾನ ಗೋಲುಗಳನ್ನು ಮಾಡಿರಲಿಲ್ಲ.
ಆದರೆ, ದ್ವಿತೀಯಾರ್ಧದದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಭಾರತದ ಕನಸು ನುಚ್ಚು ನೂರಾಯಿತು.
ಈ ನಡುವೆ, ಕುವೈತ್ ಪರವಾಗಿ 81ನೇ ನಿಮಿಷದಲ್ಲಿ ಈದ್ ಅಲ್-ರಶೀದಿ ವಿಜಯದ ಗೋಲು ಬಾರಿಸಿದರು. ಹಾಗಾಗಿ, ಖತರ್ ಮತ್ತು ಕುವೈತ್ ಮೂರನೇ ಅರ್ಹತಾ ಸುತ್ತು ಪ್ರವೇಶಿಸಿದವು.
ಭಾರತವು ಈ ಪಂದ್ಯವನ್ನು ಭಾರತದ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂಬುದಾಗಿ ಹೇಳಲಾಗಿರುವ ಸುನೀಲ್ ಚೆಟ್ರಿಯಿಲ್ಲದೆ ಆಡಿದೆ. ಅವರು ಐದು ದಿನಗಳ ಹಿಂದೆ ಅಂತರರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿಯಾಗಿದ್ದರು.
ಆದರೆ ಕೋಚ್ ಇಗೊರ್ ಸ್ಟೈಮಾಕ್ರ ಆಟಗಾರರು ಒಂದು ಹಂತದಲ್ಲಿ ಖತರ್ ಎದುರಾಳಿಗಳ ಮೇಲೆ ಮೇಲುಗೈ ಸಾಧಿಸಿ ವಿಜಯಿಗಳಾಗಿ ಹೊರಹೊಮ್ಮುವ ನಿರೀಕ್ಷೆಯನ್ನು ಮೂಡಿಸಿದ್ದರು.
*ಸಮಗ್ರ ತನಿಖೆಗೆ ಎಐಎಫ್ಎಫ್ ಮನವಿ
ದೋಹಾದಲ್ಲಿ ನಡೆದ ಭಾರತದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯವೊಂದರಲ್ಲಿ ರೆಫರಿಯು ಖತರ್ಗೆ ವಿವಾದಾಸ್ಪದ ಗೋಲು ನೀಡಿರುವ ಬಗ್ಗೆ ತನಿಖೆ ನಡೆಸುವಂತೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಪಂದ್ಯ ಕಮಿಶನರ್ಗೆ ಮನವಿ ಮಾಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಚೆಂಡು ಸಂಪೂರ್ಣ ಸ್ಥಗಿತಗೊಂಡಿರುವ ಹೊರತಾಗಿಯೂ ಬಾರಿಸಲಾದ ಗೋಲನ್ನು ದಕ್ಷಿಣ ಕೊರಿಯದ ರೆಫರಿ ಕಿಮ್ ವೂ-ಸುಂಗ್ ಮಾನ್ಯ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಎಐಎಫ್ಎಫ್ ಒತ್ತಾಯಿಸಿದೆ ಎಂದು ಅದರ ಮೂಲಗಳು ತಿಳಿಸಿವೆ.
“ನಾವು ಪಂದ್ಯ ಕಮಿಶನರ್ಗೆ ದೂರು ಸಲ್ಲಿಸಿದ್ದೇವೆ ಮತ್ತು ಆ ವಿವಾದಾಸ್ಪದ ಗೋಲಿನ ಇಡೀ ಸನ್ನಿವೇಶಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿದ್ದೇವೆ’’ ಎಂದು ಎಐಎಫ್ಎಫ್ ಅಧಿಕಾರಿಯೊಬ್ಬರು ಹೇಳಿದರು.
ಇರಾನ್ನ ಹಮೀದ್ ಮೊಮೇನಿ ಆ ಪಂದ್ಯದ ಪಂದ್ಯ ಕಮಿಶನರ್ ಆಗಿದ್ದರು. ಪಂದ್ಯದ ಆಯೋಜನೆಯ ಮೇಲೆ ನಿಗಾ ಇಡುವುದು ಮತ್ತು ಪಂದ್ಯದ ವೇಳೆ ಫಿಫಾ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು ಪಂದ್ಯ ಕಮಿಶನರ್ರ ಜವಾಬ್ದಾರಿಯಾಗಿದೆ.
*ತಂಡಕ್ಕೆ ಅನ್ಯಾಯ ಮಾಡಲಾಗಿದೆ : ಭಾರತೀಯ ಕೋಚ್ ಇಗೋರ್ ಸ್ಟೈಮಾಕ್
ತಟಸ್ಥಗೊಂಡಿದ್ದ ಚೆಂಡಿನ ಮೂಲಕ ಬಾರಿಸಲಾಗಿರುವ ಗೋಲಿಗೆ ಮಾನ್ಯತೆ ನೀಡುವ ಮೂಲಕ ನನ್ನ ತಂಡಕ್ಕೆ ಅನ್ಯಾಯ ಮಾಡಲಾಗಿದೆ ಮತ್ತು ತಂಡದ ಕನಸನ್ನು ನುಚ್ಚುನೂರುಗೊಳಿಸಲಾಗಿದೆ ಎಂದು ಭಾರತೀಯ ಫುಟ್ಬಾಲ್ ತಂಡದ ಕೋಚ್ ಇಗೊರ್ ಸ್ಟೈಮಾಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ರಾತ್ರಿ ಖತರ್ ಅದೃಷ್ಟಶಾಲಿಯಾಗಿದೆ. ಯಾಕೆಂದರೆ ಅದು ಸಕ್ರಮವಲ್ಲದ ಗೋಲಿನ ಮೂಲಕ ಪಂದ್ಯವನ್ನು ಗೆದ್ದಿದೆ. ನಾನು ರಿಪ್ಲೇಯನ್ನು ನೋಡಿದ್ದೇನೆ. ಹಾಗಾಗಿ ಆ ವಿಷಯದಲ್ಲಿ ನಾನು ಖಚಿತವಾಗಿ ಹೇಳಬಲ್ಲೆ. ಚೆಂಡು ಆಗ ಸ್ಥಗಿತಗೊಂಡಿತ್ತು. ಆದರೂ ಗೋಲನ್ನು ನೀಡಲಾಯಿತು’’ ಎಂದು ಸ್ಟೈಮಾಕ್ ಹೇಳಿದರು.
“ಇಂದಿನ ಫುಟ್ಬಾಲ್ನಲ್ಲಿ ಹೀಗಾಗಬಾರದಿತ್ತು. ಯಾಕೆಂದರೆ ಆ ಗೋಲು ಈ ಪಂದ್ಯದಲ್ಲಿ ಎಲ್ಲವನ್ನೂ ಬದಲಾಯಿತು. ಒಂದು ವೇಳೆ ಆ ಪರಿಸ್ಥಿತಿ ಇಂದು ಖತರ್ಗೆ ಎದುರಾಗಿದ್ದರೂ ನನ್ನ ಅಭಿಪ್ರಾಯ ಇದೇ ಆಗಿರುತ್ತಿತ್ತು. ನಾನು ನೆವಗಳನ್ನು ಹೇಳುತ್ತಿಲ್ಲ’’ ಎಂದರು.