×
Ad

ಆರ್‌ ಸಿ ಬಿ ತಂಡ ಸೇರಲು ಹೇಝಲ್‌ ವುಡ್ ಸಜ್ಜು

Update: 2025-05-15 21:31 IST

 ಹೇಝಲ್‌ ವುಡ್ | PC : royalchallengers.bengaluru

ಹೊಸದಿಲ್ಲಿ: 2025ರ ಆವೃತ್ತಿಯ ಐಪಿಎಲ್ ಟಿ20 ಟೂರ್ನಿಯ ಉಳಿದಿರುವ ಪಂದ್ಯಗಳನ್ನು ಆಡಲು ಜೋಶ್ ಹೇಝಲ್‌ ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡವನ್ನು ಮರು ಸೇರ್ಪಡೆಯಾಗಲು ಸಜ್ಜಾಗಿದ್ದಾರೆ ಎಂದು ‘ಸ್ಪೋಟ್ಸ್‌ಸ್ಟಾರ್’ ವರದಿ ಮಾಡಿದೆ.

ಪ್ರಯಾಣದ ವ್ಯವಸ್ಥೆಯನ್ನು ಅಂತಿಮಗೊಳಿಸಲು ಆರ್‌ಸಿಬಿ, ಆಸ್ಟ್ರೇಲಿಯದ ವೇಗದ ಬೌಲರ್‌ನೊಂದಿಗೆ ಕಾರ್ಯೋನ್ಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.

ಭುಜನೋವಿನಿಂದಾಗಿ ಪಂದ್ಯಾವಳಿಯ ಇನ್ನುಳಿದ ಪಂದ್ಯಗಳಿಂದ ಹೇಝಲ್‌ ವುಡ್ ಹೊರಗುಳಿಯುವ ನಿರೀಕ್ಷೆ ಇತ್ತು. ಇದೀಗ ಅವರು ಭಾರತಕ್ಕೆ ವಾಪಸಾಗಲು ಸಜ್ಜಾಗುತ್ತಿರುವುದು ಚೇತರಿಕೆಯಲ್ಲಿ ಸಕಾರಾತ್ಮಕ ಹೆಜ್ಜೆಯನ್ನು ಸೂಚಿಸುತ್ತದೆ. ಆರ್‌ಸಿಬಿಯ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಉದ್ದೇಶವನ್ನು ಒತ್ತಿ ಹೇಳುತ್ತಿದೆ.

ಬಲಗೈ ವೇಗದ ಬೌಲರ್ ಹೇಝಲ್‌ ವುಡ್ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಡಿರುವ 10 ಇನಿಂಗ್ಸ್‌ಗಳಲ್ಲಿ ಒಟ್ಟು 18 ವಿಕೆಟ್‌ಗಳನ್ನು ಪಡೆದು ಆರ್‌ಸಿಬಿ ಬೌಲಿಂಗ್ ವಿಭಾಗದ ನೇತೃತ್ವವಹಿಸಿದ್ದಾರೆ. ಈ ವರ್ಷದ ಐಪಿಎಲ್‌ ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ ಭಾಗವಹಿಸಲಿರುವ ಆಸ್ಟ್ರೇಲಿಯ ತಂಡದಲ್ಲೂ 33ರ ಹರೆಯದ ಹೇಝಲ್‌ ವುಡ್ ಸ್ಥಾನ ಪಡೆದಿದ್ದಾರೆ. ಪ್ಯಾಟ್ ಕಮಿನ್ಸ್ ಬಳಗವು ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ. ಜೂನ್ 11ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿರುವ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ ಆಸ್ಟ್ರೇಲಿಯ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಭಾರತ ಹಾಗೂ ಪಾಕಿಸ್ತಾನದ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇನ್ನೂ 13 ಲೀಗ್ ಪಂದ್ಯಗಳು ಆಡಲು ಬಾಕಿ ಇದ್ದು, ಪಂದ್ಯಾವಳಿಯು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ಆರ್‌ಸಿಬಿ-ಕೆಕೆಆರ್ ನಡುವಿನ ಪಂದ್ಯದ ಮೂಲಕ ಮೇ 17ರಂದು ಪುನರಾರಂಭವಾಗಲಿದೆ.

ಐಪಿಎಲ್ ತಕ್ಷಣವೇ ಶುರುವಾಗುವ ಕುರಿತು ಗೊಂದಲ ಏರ್ಪಟ್ಟ ಕಾರಣ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯದ ಹಲವು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಸ್ವದೇಶಕ್ಕೆ ವಾಪಸಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News