ಹಾಂಕಾಂಗ್ ಓಪನ್: ಲಕ್ಷ್ಯ ಸೇನ್ ಗೆ ಬೆಳ್ಳಿ ಪದಕ
ಲಕ್ಷ್ಯ ಸೇನ್ | PC : X \ @India_AllSports
ಹೊಸದಿಲ್ಲಿ, ಸೆ.15: ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಡಬಲ್ ಪ್ರಶಸ್ತಿ ಗೆಲ್ಲಬೇಕೆಂಬ ಭಾರತದ ಕನಸು ಕೈಗೂಡಲಿಲ್ಲ. ಲಕ್ಷ್ಯ ಸೇನ್ ಹಾಗೂ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ರನ್ನರ್-ಅಪ್‌ಗೆ ತೃಪ್ತಿಪಟ್ಟಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೇನ್ ಅವರು ವಿಶ್ವದ ನಂ.4ನೇ ಆಟಗಾರ ಲಿ ಶಿ ಫೆಂಗ್ ವಿರುದ್ಧ 15-21, 12-21 ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಕಳೆದ ವರ್ಷದ ನವೆಂಬರ್ ನಲ್ಲಿ ನಡೆದ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಿಯ ನಂತರ ಸೇನ್ ಅವರು ಮೊದಲ ಬಾರಿ ಫೈನಲ್‌ಗೆ ತಲುಪಿದ್ದಾರೆ. ಹಾಂಕಾಂಗ್ ಫೈನಲ್ ಪಂದ್ಯದಲ್ಲಿ ಚೀನಾದ ಎದುರಾಳಿಯ ವಿರುದ್ಧ ಸೇನ್ ಉತ್ತಮ ಪ್ರದರ್ಶನ ನೀಡುವಲ್ಲಿ ಪರದಾಟ ನಡೆಸಿದರು.
ಲೀ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ ಸೇನ್ ಅವರು 7-6 ಮುನ್ನಡೆಯಲ್ಲಿದ್ದಾರೆ. ಈ ವರ್ಷಾರಂಭದಲ್ಲಿ ನಡೆದ ಆಲ್‌ಇಂಗ್ಲೆಂಡ್ ಹಾಗೂ ಚೀನಾ ಓಪನ್ ಸಹಿತ ಹಲವು ಮುಖಾಮುಖಿಗಳಲ್ಲಿ ಲೀ ಮೇಲುಗೈ ಸಾಧಿಸಿದ್ದರು.
ಎರಡೂ ಗೇಮ್ ಗಳಲ್ಲಿ ನಿಧಾನಗತಿಯ ಆರಂಭದಿಂದ ಚೇತರಿಸಿಕೊಂಡ ಲೀ ತನ್ನ ಚುರುಕಿನ ಆಟ ಹಾಗೂ ಹೊಡೆತಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಭಾರತದ ಅಗ್ರ ರ್ಯಾಂಕಿನ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಅವರು ಲಿಯಾಂಗ್ ವೀ ಕೆಂಗ್ ಹಾಗೂ ವಾಂಗ್ ಚಾಂಗ್ ವಿರುದ್ಧ 19-21, 21-14, 21-17 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.