×
Ad

ಲಿಟನ್ ದಾಸ್ ಅವರದ್ದು ಉತ್ತಮ ನಡೆ ಎಂದು ನನಗನ್ನಿಸುತ್ತಿಲ್ಲ: ತಮೀಮ್ ಇಕ್ಬಾಲ್

Update: 2023-09-25 12:24 IST

Photo: twitter.com/MarvelBet

ಢಾಕಾ: ಬೌಲರ್ ಹಸನ್ ಮಹಮುದ್, ನಾನ್ ಸ್ಟ್ರೈಕರ್ ಎಂಡ್ ನಲ್ಲಿ ನ್ಯೂಝಿಲೆಂಡ್ ಬ್ಯಾಟರ್ ಐಶ್ ಸೋಧಿಯನ್ನು ರನೌಟ್ ಮಾಡಿದ್ದರಲ್ಲಿ ಯಾವುದೇ ತಪ್ಪಿರಲಿಲ್ಲ ಎಂದು ಬಾಂಗ್ಲಾದೇಶದ ಹಿರಿಯ ಬ್ಯಾಟರ್ ತಮೀಮ್ ಇಕ್ಬಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಏಕ ದಿನ ಪಂದ್ಯಗಳ ಸರಣಿಯ ಎರಡನೆ ಪಂದ್ಯದಲ್ಲಿ ಐಶ್ ಸೋಧಿ ರನೌಟ್ ಆಗುವ ಮೂಲಕ ಕೆಲವು ಅಚ್ಚಳಿಯದ ದೃಶ್ಯಗಳಿಗೆ ಈ ಪಂದ್ಯವು ಸಾಕ್ಷಿಯಾಯಿತು. ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಐಶ್ ಸೋಧಿ ರನ್ ಗಾಗಿ ಕ್ರೀಸ್ ತೊರೆದಾಗ ಬೌಲಿಂಗ್ ಮಾಡುತ್ತಿದ್ದ ಬಾಂಗ್ಲಾದೇಶ ಬೌಲರ್ ಹಸನ್ ಮಹಮುದ್ ಅವರನ್ನು ರನೌಟ್ ಮಾಡಲು ನಿರ್ಧರಿಸಿದರು. ಆದರೆ, ಈ ನಿರ್ಧಾರವನ್ನು ಬಾಂಗ್ಲಾದೇಶದ ನಾಯಕ ಲಿಟನ್ ದಾಸ್ ಹಿಂಪಡೆದು, ಐಶ್ ಸೋಧಿಗೆ ತಮ್ಮ ಬ್ಯಾಟಿಂಗ್ ಮುಂದುವರಿಸಲು ಅವಕಾಶ ನೀಡಿದರು. ಈ ನಿರ್ಧಾರವನ್ನು ಭಾರಿ ಕರತಾಡನದೊಂದಿಗೆ ಅಭಿಮಾನಿಗಳು ಸ್ವಾಗತಿಸಿದರಾದರೂ, ತಂಡದಲ್ಲೇ ಲಿಟನ್ ದಾಸ್ ನಿರ್ಧಾರದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತವಾಯಿತು.

ಪಂದ್ಯದಲ್ಲಿ ನ್ಯೂಝಿಲೆಂಡ್ ಗೆಲುವು ಸಾಧಿಸಿದ ನಂತರ ಮಾತನಾಡಿದ ತಮೀಮ್ ಇಕ್ಬಾಲ್, “ಆ ನಡೆಯಲ್ಲಿ ನನಗೆ ಯಾವುದೇ ತಪ್ಪು ಕಾಣಿಸುತ್ತಿಲ್ಲ. ಪಂದ್ಯದಲ್ಲಿ ಅಂತಹ ನಿಯಮವಿದೆ. ಆ ರೀತಿಯಲ್ಲಿ ಯಾರಾದರೂ ಔಟಾದರೆ, ಅಥವಾ ನಾವೇ ಆ ಬಗೆಯಲ್ಲಿ ಔಟಾದರೆ, ಇತ್ತೀಚಿನ ದಿನಗಳಲ್ಲಿ ಜನರು ಪ್ರತಿಕ್ರಿಯಿಸುತ್ತಿರುವಂತೆ ಪ್ರತಿಕ್ರಿಯಿಸಬೇಕಾದ ಅಗತ್ಯವಿದೆ ಎಂದು ನನಗನ್ನಿಸುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನ್ ಸ್ಟ್ರೈಕರ್ ಬ್ಯಾಟರ್ ಅನ್ನು ರನೌಟ್ ಮಾಡುವುದರ ಕುರಿತು ಕ್ರಿಕೆಟ್ ವಲಯದಲ್ಲಿ ಹಲವಾರು ಬಾರಿ ವಿವಾದ ಭುಗಿಲೆದ್ದಿದೆ. ಆದರೆ, ಆ ಬಗೆಯಲ್ಲಿ ಬ್ಯಾಟರ್ ಒಬ್ಬನನ್ನು ಔಟ್ ಮಾಡಬೇಕೊ ಬೇಡವೊ ಎಂಬುದು ತಂಡದ ನಿರ್ಣಯಕ್ಕೆ ಬಿಟ್ಟಿದ್ದು ಎಂದು ತಮೀಮ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

“ಈ ಕುರಿತು ಎಚ್ಚರಿಕೆ ನೀಡಬೇಕಾದ ಯಾವುದೇ ಅಗತ್ಯವಿಲ್ಲ. ಇದು ಒಂದು ಬಗೆಯಲ್ಲಿ ಬೌಲ್ಡ್ ಆದಂತೆ. ನಾವು ಆ ಬಗೆಯಲ್ಲಿ ವಿಕೆಟ್ ಪಡೆಯಬಾರದು ಎಂಬುದು ನಾಯಕನ ಭಾವನೆಯಾಗಿರಬಹುದು. ಹೀಗಾಗಿ ಅವರು ಸೋಧಿಯನ್ನು ಮರಳಿ ಬ್ಯಾಟಿಂಗ್ ಗೆ ಕರೆಸಿದ್ದಾರೆ. ಇಲ್ಲಿ ಯಾವುದೇ ಸರಿ ಅಥವಾ ತಪ್ಪಿಲ್ಲ. ಒಂದೋ ನೀವು ಮಾಡುತ್ತೀರಿ ಅಥವಾ ಮಾಡುವುದಿಲ್ಲ. ಇದು ಮುಂದುವರಿದಂತೆ, ಹಲವಾರು ತಂಡಗಳು ಇದರ ಲಾಭವವನ್ನು ಪಡೆಯಲಿವೆ” ಎಂದು ತಮೀಮ್ ಇಕ್ಬಾಲ್ ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News