ಕೊರಿಯಾ ಓಪನ್ ಪ್ರಶಸ್ತಿ ಜಯಿಸಿದ ಇಗಾ ಸ್ವಿಯಾಟೆಕ್
Photo : AFP
ಸಿಯೋಲ್, ಸೆ.21: ಆರಂಭಿಕ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡ ಪೋಲ್ಯಾಂಡ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಕೊರಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ವಿಯಾಟೆಕ್ ಅವರು ರಶ್ಯದ ಎಕಟೆರಿನಾ ಅಲೆಕ್ಸಾಂಡ್ರೋವಾ ವಿರುದ್ಧ 1-6, 7-6(3), 7-5 ಸೆಟ್‌ಗಳ ಅಂತರದಿಂದ ಜಯಶಾಲಿಯಾದರು.
ವಿಶ್ವದ ನಂ.2ನೇ ಆಟಗಾರ್ತಿ ಸ್ವಿಯಾಟೆಕ್ ಎರಡೂವರೆ ಗಂಟೆಗಳ ಕಾಲ ನಡೆದ ಫೈನಲ್‌ನಲ್ಲಿ ಗೆಲುವು ತನ್ನದಾಗಿಸಿಕೊಂಡರು. ಸ್ವಿಯಾಟೆಕ್ ಈ ವರ್ಷ ಗೆದ್ದಿರುವ 3ನೇ ಟ್ರೋಫಿ ಇದಾಗಿದೆ. ಈಗಾಗಲೇ ವಿಂಬಲ್ಡನ್ ಹಾಗೂ ಸಿನ್ಸಿನಾಟಿ ಓಪನ್ ಟೂರ್ನಿಯಲ್ಲಿ ಟ್ರೋಫಿ ಗೆದ್ದಿದ್ದಾರೆ.
2022ರಲ್ಲಿ ಕೊರಿಯಾ ಓಪನ್ ಪ್ರಶಸ್ತಿ ಜಯಿಸಿದ್ದ ಅಲೆಕ್ಸಾಂಡ್ರೋವಾ ಮೊದಲ ಸೆಟ್ಟನ್ನು 6-1 ಅಂತರದಿಂದ ಜಯಿಸಿ ಉತ್ತಮ ಆರಂಭ ಪಡೆದರು. 2ನೇ ಸೆಟ್‌ನ ಆರಂಭದಲ್ಲಿ ಅಲೆಕ್ಸಾಂಡ್ರೋವಾ ಅವರು ಸ್ವಿಯಾಟೆಕ್‌ಗೆ ಒತ್ತಡ ಹಾಕುವುದನ್ನು ಮುಂದುವರಿಸಿದರು. ಸ್ವಿಯಾಟೆಕ್ 2ನೇ ಸೆಟ್ಟನ್ನು ಟೈ=ಬ್ರೇಕರ್‌ಗೆ ವಿಸ್ತರಿಸಿದರು. ಟೈ-ಬ್ರೇಕರ್ನಲ್ಲಿ ಜಯ ಸಾಧಿಸಿದ ಸ್ವಿಯಾಟೆಕ್ ಪಂದ್ಯವನ್ನು 3ನೇ ಸೆಟ್‌ಗೆ ಕೊಂಡೊಯ್ದರು. 6 ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಸ್ವಿಯಾಟೆಕ್ 3ನೇ ಸೆಟ್ಟನ್ನು 7-5 ಅಂತರದಿಂದ ಗೆದ್ದುಕೊಂಡು ಪ್ರಶಸ್ತಿ ಬಾಚಿಕೊಂಡರು.