×
Ad

IND Vs NZ T20 | 'ಸೂರ್ಯ'ನ ಪ್ರಕೋಪಕ್ಕೆ ಬೆದರಿದ ಕಿವೀಸ್; ಭಾರತಕ್ಕೆ ಭರ್ಜರಿ ಜಯ

Update: 2026-01-23 22:30 IST

PC | X@BCCI

ರಾಯ್ಪುರ : ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಸೂರ್ಯಕುಮಾರ್ ಯಾದವ್ (ಔಟಾಗದೆ 82, 37 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ಇಶಾನ್ ಕಿಶನ್ (76 ರನ್, 32 ಎಸೆತ, 11 ಬೌಂಡರಿ, 4 ಸಿಕ್ಸರ್) ಅವರ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಟಿ-20 ಪಂದ್ಯವನ್ನು ಗೆದ್ದುಕೊಂಡಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 209 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 15.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ.

ಭಾರತ ತಂಡ 1.1 ಓವರ್‌ಗಳಲ್ಲಿ 6 ರನ್‌ಗೆ ಆರಂಭಿಕ ಆಟಗಾರರಾದ ಸ್ಯಾಮ್ಸನ್ (6 ರನ್) ಹಾಗೂ ಅಭಿಷೇಕ್ ಶರ್ಮಾ (0) ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಆಗ ಜೊತೆಯಾದ ಕಿಶನ್ ಹಾಗೂ ಸೂರ್ಯಕುಮಾರ್ ಮೂರನೇ ವಿಕೆಟ್‌ಗೆ 122 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

21 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳ ಸಹಾಯದಿಂದ ಅರ್ಧಶತಕ ಪೂರೈಸಿದ ಕಿಶನ್ 76 ರನ್‌ಗೆ ಇಶ್ ಸೋಧಿಗೆ ವಿಕೆಟ್ ಒಪ್ಪಿಸಿದರು.

23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯಕುಮಾರ್, ಭಾರತವು ಸ್ವದೇಶದಲ್ಲಿ ಆಡಿದ 100ನೇ ಟಿ-20 ಪಂದ್ಯದಲ್ಲಿ ಸುಲಭ ಜಯ ಗಳಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿವೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 208 ರನ್ ಕಲೆ ಹಾಕಿತು.

ನಾಯಕ ಮಿಚೆಲ್ ಸ್ಯಾಂಟ್ನರ್ (ಔಟಾಗದೆ 47, 27 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಅಗ್ರ ಕ್ರಮಾಂಕದ ಬ್ಯಾಟರ್ ರಚಿನ್ ರವೀಂದ್ರ (44 ರನ್, 26 ಎಸೆತ, 2 ಬೌಂಡರಿ, 4 ಸಿಕ್ಸರ್) ಅವರ ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಭಾರತ ವಿರುದ್ಧ ಟಿ-20ಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿತು.

ಈ ಹಿಂದೆ 2017ರಲ್ಲಿ ರಾಜ್‌ಕೋಟ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದ್ದೇ ನ್ಯೂಝಿಲ್ಯಾಂಡ್‌ನ ಗರಿಷ್ಠ ಸ್ಕೋರ್ ಆಗಿತ್ತು. ವೈಯಕ್ತಿಕ ಅರ್ಧಶತಕದ ಕೊಡುಗೆ ಇಲ್ಲದೇ ಟಿ-20ಯಲ್ಲಿ ಕಿವೀಸ್ ತಂಡ ಸಾಧಿಸಿದ ಗರಿಷ್ಠ ಮೊತ್ತವೂ ಇದಾಗಿದೆ.

ಇನಿಂಗ್ಸ್ ಆರಂಭಿಸಿದ ಡೆವೊನ್ ಕಾನ್ವೆ (19 ರನ್, 9 ಎಸೆತ) ಹಾಗೂ ಟಿಮ್ ಸೆಫರ್ಟ್ (24 ರನ್, 13 ಎಸೆತ) 3.2 ಓವರ್‌ಗಳಲ್ಲಿ 43 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಕಾನ್ವೆ ವಿಕೆಟ್‌ನ್ನು ಕಬಳಿಸಿದ ಹರ್ಷಿತ್ ರಾಣಾ ಈ ಜೋಡಿಯನ್ನು ಬೇರ್ಪಡಿಸಿದರು.

ಕಾನ್ವೆ ಔಟಾದ ಬಳಿಕ ಸೆಫರ್ಟ್ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು.

ಆಗ ಜೊತೆಯಾದ ರವೀಂದ್ರ ಹಾಗೂ ಗ್ಲೆನ್ ಫಿಲಿಪ್ಸ್ (19 ರನ್, 13 ಎಸೆತ) ಮೂರನೇ ವಿಕೆಟ್‌ಗೆ 55 ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು.

ಮೊದಲ ಟಿ-20 ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಫಿಲಿಪ್ಸ್ ವಿಕೆಟ್‌ನ್ನು ಕಬಳಿಸಿದ ಕುಲದೀಪ್ ಯಾದವ್ ಈ ಜೊತೆಯಾಟವನ್ನು ಮುರಿದರು.

ಏಕದಿನ ಸರಣಿಯಲ್ಲಿ ಮಿಂಚಿದ್ದ ಡ್ಯಾರಿಲ್ ಮಿಚೆಲ್ ಕೇವಲ 18 ರನ್ ಗಳಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು.

ಮಾರ್ಕ್ ಚಾಪ್ಮನ್ 13 ಎಸೆತಗಳಲ್ಲಿ 10 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ಔಟಾದರು.

ಏಳನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 47 ರನ್ ಕಲೆ ಹಾಕಿದ ಸ್ಯಾಂಟ್ನರ್ ಹಾಗೂ ಫೌಲ್ಕ್ಸ್ (ಔಟಾಗದೆ 15, 8 ಎಸೆತ) ಕಿವೀಸ್ ತಂಡದ ಸ್ಕೋರನ್ನು 208ಕ್ಕೆ ತಲುಪಿಸಿದರು.

ಭಾರತದ ಬೌಲಿಂಗ್‌ನಲ್ಲಿ ಕೊನೆಯ ಓವರ್‌ನಲ್ಲಿ 17 ರನ್ ನೀಡಿದ ಅರ್ಷದೀಪ್ ಸಿಂಗ್ 4 ಓವರ್‌ಗಳಲ್ಲಿ 53 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.

ಕುಲದೀಪ್ ಯಾದವ್ (2-35) ಯಶಸ್ವಿ ಪ್ರದರ್ಶನ ನೀಡಿದರು.

ಭಾರತ ತಂಡವು ತನ್ನ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿತ್ತು. ನಾಗಪುರದಲ್ಲಿ ನಡೆದ ಮೊದಲ ಟಿ-20 ಪಂದ್ಯದ ವೇಳೆ ಬೆರಳಿನ ಗಾಯಕ್ಕೆ ಒಳಗಾಗಿದ್ದ ಅಕ್ಷರ್ ಪಟೇಲ್ ಹಾಗೂ ಹಿರಿಯ ವೇಗಿ ಜಸ್‌ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಲಾಯಿತು. ಅವರ ಬದಲಿಗೆ ಕುಲದೀಪ್ ಯಾದವ್ ಹಾಗೂ ಹರ್ಷಿತ್ ರಾಣಾ ತಂಡಕ್ಕೆ ಸೇರಿದರು.

ನ್ಯೂಝಿಲ್ಯಾಂಡ್ ತಂಡ ಮೂರು ಬದಲಾವಣೆಗಳನ್ನು ಮಾಡಿಕೊಂಡಿತು. ರಾಬಿನ್ಸನ್ ಬದಲಿಗೆ ಟಿಮ್ ಸೆಫರ್ಟ್, ಕ್ರಿಸ್ಟಿಯನ್ ಕ್ಲಾರ್ಕ್ ಬದಲಿಗೆ ಝ್ಯಾಕ್ ಫೌಲ್ಕ್ಸ್ ಹಾಗೂ ಜಮೀಸನ್ ಸ್ಥಾನಕ್ಕೆ ಮ್ಯಾಟ್ ಹೆನ್ರಿ ತಂಡಕ್ಕೆ ಆಗಮಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News