×
Ad

ಟಿ20 ವಿಶ್ವಕಪ್‌ನಿಂದ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದು ಏಕೆ? : ರೋಹಿತ್ ಶರ್ಮಾ ಹೇಳಿದ್ದಿಷ್ಟು...

Update: 2026-01-22 08:30 IST

PC: x.com/IExpressSports

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಪಂದ್ಯವನ್ನು ಮೈದಾನದಿಂದ ಹೊರಗೆ ವೀಕ್ಷಿಸಲಿದ್ದಾರೆ. ಇದನ್ನು ಅವರು “ವಿಚಿತ್ರ ಅನುಭವ” ಎಂದು ಬಣ್ಣಿಸಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದು, ಇದೀಗ ಕೇವಲ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಇವರಿಬ್ಬರೂ ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತರಾಗಿದ್ದಾರೆ.

ಫೆಬ್ರವರಿ 7ರಂದು ಮುಂಬೈನಲ್ಲಿ ಅಮೆರಿಕ ವಿರುದ್ಧದ ಪಂದ್ಯದಿಂದ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದ ಭಾಗವಾಗಿರುವುದಿಲ್ಲ. ದ್ವಿಪಕ್ಷೀಯ ಸರಣಿ ತಪ್ಪಿಸಿಕೊಳ್ಳುವುದಕ್ಕಿಂತ ವಿಶ್ವಕಪ್ ತಪ್ಪಿಸಿಕೊಳ್ಳುವುದು ಹೆಚ್ಚು ನೋವು ನೀಡುತ್ತದೆ ಎಂದು ಅವರು ಜಿಯೋಹಾಟ್‌ಸ್ಟಾರ್ ಶೋದಲ್ಲಿ ಮಾತನಾಡುತ್ತ ಹೇಳಿದರು.

“ಟಿ20 ವಿಶ್ವಕಪ್ ಪಂದ್ಯವನ್ನು ಮನೆಯಿಂದ ವೀಕ್ಷಿಸುವುದು ನಿಜಕ್ಕೂ ವಿಚಿತ್ರ ಅನುಭವ. ಈ ಟೂರ್ನಿ ಆರಂಭವಾದಾಗಿನಿಂದಲೂ ನಾನು ಪ್ರತಿಯೊಂದು ವಿಶ್ವಕಪ್ ತಂಡದ ಭಾಗವಾಗಿದ್ದೆ. ಈಗ ಇದು ಸಂಪೂರ್ಣ ಭಿನ್ನ ಅನುಭವ” ಎಂದು ರೋಹಿತ್ ಶರ್ಮಾ ಹೇಳಿದರು.

ಡ್ರೆಸ್ಸಿಂಗ್ ರೂಮಿನಲ್ಲಿ ವಿಶ್ವಾಸ ಉಳಿಸಿಕೊಳ್ಳುವುದು ನಾಯಕತ್ವದ ಅತ್ಯಂತ ಸವಾಲಿನ ಅಂಶ ಎಂದು ಅವರು ಅಭಿಪ್ರಾಯಪಟ್ಟರು. ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗುತ್ತದೆ. ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ; ಆದರೆ ಆ ನಿರ್ಧಾರ ಏಕೆ ತೆಗೆದುಕೊಳ್ಳಲಾಗಿದೆ ಎಂಬುದನ್ನು ಪ್ರತಿಯೊಬ್ಬ ಆಟಗಾರಿಗೂ ಮನವರಿಕೆ ಮಾಡುವುದು ಮುಖ್ಯ ಎಂದು ಹೇಳಿದರು.

ತಂಡದ ಸಮತೋಲನ ಕಾಪಾಡಿಕೊಳ್ಳುವ ಉದ್ದೇಶದಿಂದ ಏಷ್ಯಾ ಕಪ್ ಹಾಗೂ 2022ರ ಟಿ20 ವಿಶ್ವಕಪ್ ತಂಡದಿಂದ ಶ್ರೇಯಸ್ ಅಯ್ಯರ್ ಅವರನ್ನು ಹೊರಗಿಟ್ಟ ಸಂದರ್ಭವನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.

“ನಮಗೆ ಬೌಲಿಂಗ್‌ನಲ್ಲಿ ಹೆಚ್ಚು ಆಯ್ಕೆಗಳು ಬೇಕಾಗಿದ್ದವು. ಆ ಸಮಯದಲ್ಲಿ ನಮಗೆ ದೀಪಕ್ ಉತ್ತಮ ಆಯ್ಕೆಯಾಗಿ ಕಂಡರು. ಶ್ರೇಯಸ್‌ಗೆ ಬೇಸರವಾಗಿರಬಹುದು, ದೀಪಕ್ ಸಂತೋಷಪಟ್ಟರು. ತಂಡದ ಹಿತದೃಷ್ಟಿಯಿಂದ ಹೀಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ನಾನು ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಬ್ಬರೂ ಶ್ರೇಯಸ್ ಅಯ್ಯರ್ ಜೊತೆ ಮಾತನಾಡಿದ್ದೇವೆ” ಎಂದು ರೋಹಿತ್ ಶರ್ಮಾ ನೆನಪಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News