Indonesia Masters | ಸಿಂಧು, ಲಕ್ಷ್ಯ ಸೇನ್ ಗೆ ಸೋಲು
ಲಕ್ಷ್ಯ ಸೇನ್ | Photo Credit : PTI \ AP
ಜಕಾರ್ತ, ಜ.23: ಇಂಡೋನೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ನೇರ ಗೇಮ್‌ಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಈ ಇಬ್ಬರ ಸೋಲಿನೊಂದಿಗೆ 5,00,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.
ಶುಕ್ರವಾರ 42 ನಿಮಿಷಗಳ ಕಾಲ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಿಂಧು ಅವರು ಅಗ್ರ ಶ್ರೇಯಾಂಕಿತ ಹಾಗೂ ವಿಶ್ವದ ನಂ.4 ಆಟಗಾರ್ತಿ ಚೀನಾದ ಚೆನ್ ಯು ಫೀ ವಿರುದ್ಧ 13-21, 17-21 ಗೇಮ್‌ಗಳ ಅಂತರದಿಂದ ಸೋತರು. ಎರಡನೇ ಗೇಮ್‌ನಲ್ಲಿ ಅನುಚಿತ ವರ್ತನೆಗಾಗಿ ಸಿಂಧು ಅವರಿಗೆ ಹಳದಿ ಕಾರ್ಡ್ ನೀಡಲಾಯಿತು. ಕೆಲವು ಪಾಯಿಂಟ್‌ಗಳ ನಂತರ ಗೇಮ್ ವಿಳಂಬ ಮಾಡಿದ ಕಾರಣ ಅಂಪೈರ್ ರೆಡ್ ಕಾರ್ಡ್ ನೀಡಿ ಪಾಯಿಂಟ್ ಪೆನಾಲ್ಟಿ ವಿಧಿಸಿದರು.
ಈ ಸೋಲಿನೊಂದಿಗೆ ಸಿಂಧು ಅವರು ಹೆಡ್-ಟು-ಹೆಡ್ ದಾಖಲೆಯಲ್ಲಿ ಚೆನ್ ವಿರುದ್ಧ 6-8ರಿಂದ ಹಿನ್ನಡೆ ಅನುಭವಿಸಿದ್ದಾರೆ. 2019ರಲ್ಲಿ ಕೊನೆಯ ಬಾರಿ ಸಿಂಧು ಅವರು ಚೆನ್ ಎದುರು ಜಯ ಸಾಧಿಸಿದ್ದರು.
46 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಲಕ್ಷ್ಯ ಸೇನ್ ಅವರು ಥಾಯ್ಲೆಂಡ್‌ನ ಉದಯೋನ್ಮುಖ ಪ್ರತಿಭೆ ಪಣಿಚ್ಚಫೋನ್ ತೀರರತ್ಸಕುಲ್ ವಿರುದ್ಧ 18-21, 20-22 ಗೇಮ್‌ಗಳ ಅಂತರದಿಂದ ಸೋಲನುಭವಿಸಿದರು.
ಗುರುವಾರ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಕೆ. ಶ್ರೀಕಾಂತ್ ಮತ್ತು ಅನ್ಮೋಲ್ ಖರ್ಬ್ ಕೂಡ ಸೋತಿದ್ದರು.