ಇಂಡೋನೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್: ಪಿ.ವಿ. ಸಿಂಧು, ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಪಿ.ವಿ. ಸಿಂಧು | Photo Credit ; PTI
ಜಕಾರ್ತ, ಜ.22: ಭಾರತೀಯ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಲಕ್ಷ್ಯ ಸೇನ್ 2026ರ ಆವೃತ್ತಿಯ ಇಂಡೋನೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ಪಂದ್ಯದ ಅಂತಿಮ-16ರ ಸುತ್ತಿನ ಪಂದ್ಯಗಳಲ್ಲಿ ನೇರ ಗೇಮ್‌ಗಳ ಅಂತರದಿಂದ ಜಯಶಾಲಿಯಾದರು.
ಅರ್ಧಗಂಟೆಯೊಳಗೆ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಹಾಂಕಾಂಗ್‌ನ ಜೇಸನ್ ಗುನವನ್ ವಿರುದ್ಧ 21-10, 21-11 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದರು.
ಇದೇ ವೇಳೆ, ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು 43 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ಲೈನ್ ಜಾಯೆರ್‌ಫೆಲ್ಟ್‌ರನ್ನು 21-19, 21-18 ಗೇಮ್‌ಗಳ ಅಂತರದಿಂದ ಮಣಿಸಿದರು.
ಸಿಂಧು ಡೆನ್ಮಾರ್ಕ್ ಆಟಗಾರ್ತಿಯ ವಿರುದ್ಧ ಈ ತನಕ ಆಡಿರುವ ಆರು ಪಂದ್ಯಗಳ ಪೈಕಿ ಐದನೇ ಗೆಲುವು ದಾಖಲಿಸಿದರು.
ಈ ಫಲಿತಾಂಶದ ಮೂಲಕ ಸಿಂಧು ಅವರು ವೃತ್ತಿಜೀವನದಲ್ಲಿ 500ನೇ ಗೆಲುವು ದಾಖಲಿಸಿದ ವಿಶ್ವದ ಆರನೇ ಸಿಂಗಲ್ಸ್ ಆಟಗಾರ್ತಿ ಹಾಗೂ ಮೊದಲ ಭಾರತೀಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಹೈದರಾಬಾದ್ ಆಟಗಾರ್ತಿ ಸಿಂಧು ಈ ತನಕ 732 ಪಂದ್ಯಗಳನ್ನು ಆಡಿದ್ದು, ವಿಜಯದ ಶೇಕಡಾವಾರು 68.3ರಷ್ಟಿದೆ.
ಸಿಂಧು ಮುಂದಿನ ಸುತ್ತಿನಲ್ಲಿ ಪಂದ್ಯಾವಳಿಯ ಅಗ್ರ ಶ್ರೇಯಾಂಕಿತೆ ಹಾಗೂ ವಿಶ್ವದ ನಂ.4ನೇ ರ್ಯಾಂಕಿನ ಚೀನಾದ ಆಟಗಾರ್ತಿ ಚೆನ್ ಯು ಫಿ ಅವರನ್ನು ಎದುರಿಸಲಿದ್ದಾರೆ.
ಸಿಂಧು ಹಾಗೂ ಚೆನ್ ಈ ತನಕ 13 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು, ಸಿಂಧು ಒಟ್ಟಾರೆ ದಾಖಲೆಯಲ್ಲಿ 7-6 ಅಂತರದಿಂದ ಅಲ್ಪ ಮುನ್ನಡೆಯಲ್ಲಿದ್ದಾರೆ. ಸಿಂಧು 2019ರಲ್ಲಿ ಚೆನ್ ವಿರುದ್ಧ ಕೊನೆಯ ಬಾರಿ ಜಯ ಸಾಧಿಸಿದ್ದರು. ಈ ದಾಖಲೆಯನ್ನು ಉತ್ತಮಪಡಿಸಿಕೊಳ್ಳುವ ತವಕದಲ್ಲಿದ್ದಾರೆ.