ಟಿ-20 ಕ್ರಿಕೆಟ್ ವಿಶ್ವಕಪ್| ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾ ನಿರಾಕರಣೆ: ಪಂದ್ಯಗಳ ಸ್ಥಳಾಂತರ ಬೇಡಿಕೆ ಪುನರುಚ್ಚಾರ
Photo Credit : PTI
ಢಾಕಾ, ಜ. 22: ಭದ್ರತಾ ಕಾರಣಗಳಿಗಾಗಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಡುವುದಕ್ಕಾಗಿ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ಕ್ರಿಕೆಟ್ ತಂಡ ಗುರುವಾರ ನಿರಾಕರಿಸಿದೆ.
ಬಾಂಗ್ಲಾದೇಶ ಸರಕಾರದ ಸಲಹೆಗಾರ ಪ್ರೊಫೆಸರ್ ಆಸಿಫ್ ನಝ್ರುಲ್, ತಂಡದ ಕಳವಳವನ್ನು ನಿವಾರಿಸಲು ವಿಫಲವಾಗಿರುವುದಕ್ಕಾಗಿ ಕ್ರಿಕೆಟ್‌ನ ಜಾಗತಿಕ ಆಡಳಿ ಮಂಡಳಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯನ್ನು ಟೀಕಿಸಿದ್ದಾರೆ. ಅದೇ ವೇಳೆ, ಪಂದ್ಯಾವಳಿಯಲ್ಲಿ ಆಡಲು ಬಾಂಗ್ಲಾದೇಶ ಸಿದ್ಧವಾಗಿದೆ ಎಂದು ಹೇಳಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ಅಮೀನುಲ್ ಇಸ್ಲಾಮ್ ಬುಲ್‌ಬುಲ್, ಆದರೆ, ಅದರ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಯಬೇಕು ಎಂದು ಹೇಳಿದ್ದಾರೆ.
ಢಾಕಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುವಜನ ಮತ್ತು ಕ್ರೀಡಾ ಇಲಾಖೆಯ ಸಲಹೆಗಾರ ನಝ್ರುಲ್, ವಿದೇಶಕ್ಕೆ ತೆರಳುತ್ತಿರುವ ನಾಗರಿಕರ ಸಂಭಾವ್ಯ ಭದ್ರತಾ ಬೆದರಿಕೆಯನ್ನು ಅಂದಾಜಿಸುವುದು ಸಂಬಂಧಿತ ಸರಕಾರದ ಜವಾಬ್ದಾರಿಯೇ ಹೊರತು, ಬಾಹ್ಯ ವ್ಯಕ್ತಿಗಳು ನಿರ್ಧರಿಸುವ ವಿಷಯವಲ್ಲ ಎಂದು ಹೇಳಿದ್ದಾರೆ.
‘‘ನಮ್ಮ ನಿರ್ಧಾರವನ್ನು ಬದಲಿಸಲುವ ಅವಕಾಶವಿಲ್ಲ. ಆದರೆ ನಾವು ಇನ್ನೂ ಬಿಟ್ಟು ಕೊಡುತ್ತಿಲ್ಲ. ನಮ್ಮ ತಂಡವು ಆಡಲು ಸಿದ್ಧವಾಗಿದೆ ಹಾಗೂ ಐಸಿಸಿ ನ್ಯಾಯ ನೀಡುತ್ತದೆ ಎಂಬ ಭರವಸೆ ನಮಗೆ ಇನ್ನೂ ಇದೆ. ಐಸಿಸಿಯು ನಮ್ಮ ನೈಜ ಭದ್ರತಾ ಕಳವಳವನ್ನು ಗಣನೆಗೆ ತೆಗೆದುಕೊಂಡು ನಮಗೆ ಶ್ರೀಲಂಕಾದಲ್ಲಿ ಆಡಲು ಅವಕಾಶ ನೀಡಬೇಕೆಂದು ಬಯಸುತ್ತೇವೆ’’ ಎಂದು ಅವರು ಹೇಳಿದರು.
ಬಾಂಗ್ಲಾದೇಶ ತಂಡದ ಕ್ರಿಕೆಟಿಗರು ಮತ್ತು ಕ್ರಿಕೆಟ್ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡುತ್ತಿದ್ದರು.
‘‘ಈ ಹಂತದಲ್ಲಿ, ಭಾರತದಲ್ಲಿ ಆಡುವುದಕ್ಕೆ ಸಂಬಂಧಿಸಿದ ಭದ್ರತಾ ಬೆದರಿಕೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಕಳವಳಕ್ಕೆ ಯಾವುದೇ ಅಮೂರ್ತ ಅಥವಾ ಕಾಲ್ಪನಿಕ ವಿಷಯ ಕಾರಣವಲ್ಲ. ಇದು ಒಂದು ನೈಜ ಘಟನೆ ಆಧಾರಿತವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ತೀವ್ರವಾದಿಗಳ ಒತ್ತಡಕ್ಕೆ ಮಣಿದು, ನಮ್ಮ ಪ್ರಮುಖ ಆಟಗಾರರ ಪೈಕಿ ಒಬ್ಬರಾಗಿರುವ ಮುಸ್ತಾಫಿಝುರ‌್ರಹ್ಮಾನ್‌ಗೆ ಭದ್ರತೆ ನೀಡಲು ವಿಫಲವಾಗಿದೆ. ಬದಲಿಗೆ, ಭಾರತವನ್ನು ತೊರೆಯುವಂತೆ ಅವರಿಗೆ ಸೂಚಿಸಲಾಯಿತು’’ ಎಂದು ನಝ್ರುಲ್ ಹೇಳಿದರು.
‘‘ಭಾರತೀಯ ಕ್ರಿಕೆಟ್ ಮಂಡಳಿಯು ಅಲ್ಲಿನ ಸರಕಾರದ ವಿಸ್ತರಿತ ಘಟಕವಾಗಿದೆ. ಅದಕ್ಕೆ ಒಬ್ಬ ಆಟಗಾರನಿಗೂ ಭದ್ರತೆ ಕೊಡಲು ಸಾಧ್ಯವಾಗುತ್ತಿಲ್ಲ. ನಮ್ಮ ಇಡೀ ತಂಡ, ಪತ್ರಕರ್ತರು ಮತ್ತು ಪ್ರೇಕ್ಷಕರಿಗೆ ಭದ್ರತೆ ನೀಡಲು ನಮಗೆ ಸಾಧ್ಯವಾಗುತ್ತದೆ ಎಂಬ ಭರವಸೆಯನ್ನು ಕೊಡಲು ಐಸಿಸಿಗಾಗಲಿ, ಭಾರತ ಸರಕಾರಕ್ಕಾಗಲಿ ಸಾಧ್ಯವಾಗಿಲ್ಲ’’ ಎಂದು ಅವರು ನುಡಿದರು.
ಸರಕಾರದ ನಿಲುವನ್ನು ಬೆಂಬಲಿಸಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅಮೀನುಲ್ ಇಸ್ಲಾಮ್ ಬುಲ್‌ಬುಲ್, ತನ್ನ ಬೇಡಿಕೆಗಳ ಬಗ್ಗೆ ಮಂಡಳಿಯು ಅಚಲವಾಗಿದೆ ಎಂದರು. ‘‘ಜಾಗತಿಕ ಸಂಸ್ಥೆಯೊಂದು 24 ಗಂಟೆಗಳ ಅವಧಿಯ ಅಂತಿಮ ಗಡುವನ್ನು ನೀಡಲು ಸಾಧ್ಯವಿಲ್ಲ. ನಾವು ಹೋರಾಟವನ್ನು ಮುಂದುವರಿಸುತ್ತೇವೆ’’ ಎಂದು ಬುಲ್‌ಬುಲ್ ಹೇಳಿದರು.
‘‘ಬಾಂಗ್ಲಾದೇಶವು ಕ್ರಿಕೆಟ್-ಪ್ರೇಮಿ ದೇಶವಾಗಿದೆ. ಸುಮಾರು 20 ಕೋಟಿ ಜನಸಂಖ್ಯೆಯ ದೇಶವೊಂದು ವಿಶ್ವಕಪ್‌ನಿಂದ ವಂಚಿತವಾದರೆ, ಐಸಿಸಿಯು ಬೃಹತ್ ಸಂಖ್ಯೆಯ ಪ್ರೇಕ್ಷಕರನ್ನು ಕಳೆದುಕೊಳ್ಳುತ್ತದೆ’’ ಎಂದರು.
ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕು ಎಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮನವಿಯನ್ನು ಬುಧವಾರ ಐಸಿಸಿ ತಿರಸ್ಕರಿಸಿತ್ತು ಹಾಗೂ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ತರದಿರಲು ಅದು ನಿರ್ಧರಿಸಿತ್ತು.