Photo Credit : X

ರಾಂಚಿ: ಸಿಕ್ಸರ್ ಗಳ ಸುರಿಮಳೆ, ಶತಕದ ಅಬ್ಬರ, ಕೊನೆಯವರೆಗೂ ಕುಗ್ಗದ ರನ್ ವೇಗ! ಭಾರತ ನೀಡಿದ್ದ 250 ರನ್ ಗಳ ಬೃಹತ್ ಗುರಿಯನ್ನೇ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನ ಗರಿಷ್ಠ ಯಶಸ್ವಿ ರನ್ ಚೇಸ್ ದಾಖಲಿಸಿತು. ನಾಯಕ ಶಾಯ್ ಹೋಪ್ ಅವರ ಅಜೇಯ ಶತಕ ಹಾಗೂ ಶೆರ್ಫೇನ್ ರುದರ್‌ ಫೋರ್ಡ್ ಅವರ ಸ್ಫೋಟಕ ಆಟದ ನೆರವಿನಿಂದ ಪ್ರವಾಸಿ ತಂಡ ಎರಡನೇ ಟಿ20 ಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿ 1–1ರಲ್ಲಿ ಸಮಬಲಗೊಂಡಿತು.

ಭಾರತದ 249 ರನ್ ಗಳ ಬೃಹತ್ ಮೊತ್ತಕ್ಕೆ ದಿಟ್ಟ ಉತ್ತರ ನೀಡಿದ ವೆಸ್ಟ್ ಇಂಡೀಸ್, 18.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 252 ರನ್ ಗಳಿಸಿತು. ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ ತಲುಪಿತು. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ನ ಈವರೆಗಿನ ಗರಿಷ್ಠ ಯಶಸ್ವಿ ರನ್ ಚೇಸ್ ಇದಾಗಿದೆ.

►ಹೋಪ್ ಶತಕ, ರುದರ್ ಫೋರ್ಡ್ ಅಬ್ಬರ

ವೆಸ್ಟ್ ಇಂಡೀಸ್ ನ ಗೆಲುವಿನ ರೂವಾರಿ ನಾಯಕ ಶಾಯ್ ಹೋಪ್. ಕೇವಲ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್ ಗಳ ಸಹಿತ ಅಜೇಯ 102 ರನ್ ಗಳಿಸಿದ ಅವರು, ಭಾರತದ ಬೌಲರ್ ಗಳ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದರು.

ಆರಂಭದಲ್ಲಿ ರನ್ ವೇಗ ಹೆಚ್ಚಿಸಿದ ಶೆರ್ಫೇನ್ ರುದರ್‌ ಫೋರ್ಡ್, 37 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್ ಗಳ ನೆರವಿನಿಂದ 84 ರನ್ ಗಳಿಸಿದರು. ರುದರ್‌ ಫೋರ್ಡ್ ಆಕ್ರಮಣಕ್ಕೆ ವೇದಿಕೆ ಸಿದ್ಧಪಡಿಸಿದರೆ, ಬಳಿಕ ಹೋಪ್ ಇನ್ನಿಂಗ್ಸ್ ನ ಸಂಪೂರ್ಣ ನಿಯಂತ್ರಣ ತಮ್ಮದಾಗಿಸಿಕೊಂಡರು. ರೊಮಾರಿಯೊ ಶೆಫರ್ಡ್ ಕೂಡ 13 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಗಳ ಸಹಿತ ಅಜೇಯ 34 ರನ್ ಗಳಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಆರಂಭದಲ್ಲೇ ಕಮಿಲ್ ಪೂರನ್ (4) ಹಾಗೂ ಶಿಮ್ರಾನ್ ಹೆಟ್ಮೈರ್ (0) ಅವರನ್ನು ಮಯಾಂಕ್ ಯಾದವ್ ಔಟ್ ಮಾಡಿದ್ದರಿಂದ ಭಾರತಕ್ಕೆ ಮೇಲುಗೈ ಸಿಕ್ಕಿತ್ತು. ಐದು ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್‌ ಗೆ ರೋವ್ಮನ್ ಪೊವೆಲ್ (24) ಚೇತರಿಕೆ ನೀಡಿದರು. ಬಳಿಕ ಹೋಪ್ ಮತ್ತು ರುದರ್‌ ಫೋರ್ಡ್ ಭಾರತದ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ರುದರ್‌ ಫೋರ್ಡ್ ವಿಕೆಟ್ ಪತನದ ಬಳಿಕವೂ ಹೋಪ್ ಮತ್ತು ಶೆಫರ್ಡ್ ಅಬ್ಬರ ಮುಂದುವರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟರ್ ಗಳು ಚೆಂಡನ್ನು ಪದೇಪದೇ ಬೌಂಡರಿ ಗೆರೆ ದಾಟಿಸಿದರು. ಆದರೆ, ಸಿಕ್ಸರ್ ಗಳ ಲೆಕ್ಕಾಚಾರದಲ್ಲಿ ವೆಸ್ಟ್ ಇಂಡೀಸ್ ಮೇಲುಗೈ ಸಾಧಿಸಿತು. ಭಾರತ 16 ಸಿಕ್ಸರ್ ಗಳನ್ನು ಬಾರಿಸಿದರೆ, ವೆಸ್ಟ್ ಇಂಡೀಸ್ 20 ಸಿಕ್ಸರ್ ಗಳನ್ನು ಸಿಡಿಸಿತು. ಈ ನಾಲ್ಕು ಸಿಕ್ಸರ್ ಗಳ ಹೆಚ್ಚುವರಿ ಕೊಡುಗೆ ಪಂದ್ಯದ ಫಲಿತಾಂಶದಲ್ಲಿ ನಿರ್ಣಾಯಕವಾಯಿತು.

ಇಬ್ಬನಿಯ ಪ್ರಭಾವವಿದ್ದ ಪರಿಸ್ಥಿತಿಯಲ್ಲಿ ಭಾರತಕ್ಕೆ ಇನ್ನಷ್ಟು ರನ್ ಗಳ ಮುನ್ನಡೆ ಅಗತ್ಯವಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 249 ರನ್ ಗಳಿಸಿದ ಬಳಿಕ ಈ ಮೊತ್ತ ಗೆಲುವಿಗೆ ಸಾಕಾಗಬಹುದು ಎಂಬ ನಿರೀಕ್ಷೆ ಆತಿಥೇಯರಲ್ಲಿತ್ತು. ಆದರೆ, ವೆಸ್ಟ್ ಇಂಡೀಸ್ ನ ಬ್ಯಾಟಿಂಗ್ ಸಾಮರ್ಥ್ಯ ರಾಂಚಿಯಲ್ಲಿ ಸಂಪೂರ್ಣವಾಗಿ ಅನಾವರಣಗೊಂಡಿತು.

►ಸತತ ಎರಡನೇ ದಾಖಲೆ ಬೆನ್ನಟ್ಟಿದ ವಿಂಡೀಸ್

ವೆಸ್ಟ್ ಇಂಡೀಸ್ ತಂಡಕ್ಕೆ ಇದು ಮತ್ತೊಂದು ಮಹತ್ವದ ರನ್ ಚೇಸ್. ಕೆಲವೇ ದಿನಗಳ ಹಿಂದೆ ನ್ಯೂ ಚಂಡೀಗಢದಲ್ಲಿ 352 ರನ್ ಗಳ ಗುರಿಯನ್ನು ಬೆನ್ನಟ್ಟಿ ತನ್ನ ಗರಿಷ್ಠ ಯಶಸ್ವಿ ಏಕದಿನ ರನ್ ಚೇಸ್ ದಾಖಲಿಸಿದ್ದ ತಂಡ, ಇದೀಗ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲೂ ತನ್ನದೇ ದಾಖಲೆ ಬರೆದಿದೆ. ಈ ಮಾದರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2023ರಲ್ಲಿ 259 ರನ್ ಗಳ ಗುರಿ ಬೆನ್ನಟ್ಟಿ ಗೆದ್ದಿರುವ ದಕ್ಷಿಣ ಆಫ್ರಿಕಾ ಮಾತ್ರ ಇದಕ್ಕಿಂತ ದೊಡ್ಡ ಯಶಸ್ವಿ ರನ್ ಚೇಸ್ ದಾಖಲಿಸಿದೆ.

ಈ ಗೆಲುವಿನೊಂದಿಗೆ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಸತತ 10 ಗೆಲುವುಗಳ ಸರಣಿಗೂ ಅಂತ್ಯವಾಯಿತು.

►ಸ್ಯಾಮ್ಸನ್ ಅಬ್ಬರ ವ್ಯರ್ಥ

ಇದಕ್ಕೂ ಮೊದಲು ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.  ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು.

ಸಂಜು ಸ್ಯಾಮ್ಸನ್ 41 ಎಸೆತಗಳಲ್ಲಿ 82 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಇಶಾನ್ ಕಿಶನ್ 22 ಎಸೆತಗಳಲ್ಲಿ 43 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 18 ಎಸೆತಗಳಲ್ಲಿ 40 ರನ್ ಗಳಿಸಿದರೆ, ಉಪನಾಯಕ ತಿಲಕ್ ವರ್ಮಾ 18 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿದರು. ಭಾರತದ ಬ್ಯಾಟರ್ ಗಳ ಸ್ಫೋಟಕ ಆಟ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿತ್ತು. ಆದರೆ, ಬೌಲರ್ ಗಳು ಆ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲರಾದರು.

ಭಾರತದ ಪರ ಮಯಾಂಕ್ ಯಾದವ್ 36 ರನ್ ನೀಡಿ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ ಒಂದು ವಿಕೆಟ್ ಗಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor