ಅಂತಿಮ ಟೆಸ್ಟ್: ಭಾರತಕ್ಕೆ ರೋಚಕ ಜಯ, ಸರಣಿ ಸಮಬಲ
ಮುಹಮ್ಮದ್ ಸಿರಾಜ್ (Photo:X/BCCI)
ಲಂಡನ್, ಆ.4: ಟೆಸ್ಟ್ ಕ್ರಿಕೆಟ್ ನಲ್ಲಿ ಕಂಡು ಬಂದ ಅತ್ಯಂತ ರೋಮಾಂಚಕ ಪಂದ್ಯದಲ್ಲಿ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ ನ ನೆರವಿನಿಂದ ಟೀಮ್ ಇಂಡಿಯಾವು 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಕೇವಲ 6 ರನ್ ನಿಂದ ಮಣಿಸಿದೆ.
ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕಡಿಮೆ ರನ್ ಅಂತರದಿಂದ ಜಯ ಸಾಧಿಸಿರುವ ಭಾರತ ಕ್ರಿಕೆಟ್ ತಂಡವು ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆದ ಐದು ಪಂದ್ಯಗಳ ಸರಣಿಯನ್ನು 2-2ರಿಂದ ಸಮಬಲಗೊಳಿಸಿ ಸರಣಿ ಸೋಲಿನಿಂದ ಪಾರಾಗುವಲ್ಲಿ ಶಕ್ತವಾಗಿದೆ. ಭಾರತ ತಂಡವು ಈ ಹಿಂದೆ ಆಸ್ಟ್ರೇಲಿಯದ ವಿರುದ್ಧ 13 ರನ್ ಅಂತರದಿಂದ ಜಯ ದಾಖಲಿಸಿತ್ತು.
ಇಂಗ್ಲೆಂಡ್ ತಂಡವು 2018ರಲ್ಲಿ ಸ್ವದೇಶದಲ್ಲಿ 4-1ರಿಂದ ಜಯ ಸಾಧಿಸಿದ ನಂತರ ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ.
ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಅವರ ಶತಕದ ಬಲದಿಂದ 4ನೇ ದಿನವಾದ ರವಿವಾರ ಇಂಗ್ಲೆಂಡ್ ತಂಡ ಗೆಲುವಿನ ಹಾದಿಯಲ್ಲಿತ್ತು. ದಿನದಾಟದಂತ್ಯಕ್ಕೆ ಅತ್ಯುತ್ತಮ ಬೌಲಿಂಗ್ ಸಂಘಟಿಸಿದ ಭಾರತವು ಪುಟಿದೇಳುವಲ್ಲಿ ಯಶಸ್ವಿಯಾಯಿತು.
ಕೊನೆಯ ದಿನದಾಟವಾದ ಸೋಮವಾರ ಇಂಗ್ಲೆಂಡ್ ತಂಡದ ಗೆಲುವಿಗೆ ಕೇವಲ 35 ರನ್ ಅಗತ್ಯವಿತ್ತು. ಭಾರತದ ಗೆಲುವಿಗೆ ಕೂಡ ನಾಲ್ಕೇ ವಿಕೆಟ್ ಬೇಕಾಗಿತ್ತು. ಹೀಗಾಗಿ ಬೆಳಗ್ಗಿನ ಅವಧಿಯನ್ನು ಉಭಯ ತಂಡಗಳು ಆತಂಕದೊಂದಿಗೆ ಆರಂಭಿಸಿದವು.
ಇಂಗ್ಲೆಂಡ್ ತಂಡದ ಓವರ್ಟನ್ ಅವರು ಪ್ರಸಿದ್ಧ ಕೃಷ್ಣ ಎಸೆದ ಮೊದಲೆರಡು ಎಸೆತಗಳಲ್ಲಿ ಎರಡು ಬೌಂಡರಿ ಸಿಡಿಸಿದರು. ಆಗ ದಾಳಿಗಿಳಿದ ಮುಹಮ್ಮದ್ ಸಿರಾಜ್ ಪಂದ್ಯವನ್ನು ಭಾರತದತ್ತ ತಿರುಗಿಸಿದರು. ಮೊದಲಿಗೆ ವಿಕೆಟ್ ಕೀಪರ್-ಬ್ಯಾಟರ್ ಜಮೀ ಸ್ಮಿತ್(2 ರನ್)ವಿಕೆಟ್ ಪಡೆದು ಭಾರತಕ್ಕೆ ಮೇಲುಗೈ ಒದಗಿಸಿದರು. ಮುಂದಿನ ಓವರ್ ನಲ್ಲಿ ಜಮೀ ಓವರ್ಟನ್ ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಸಿರಾಜ್ ಭಾರತ ತಂಡವು ಇಂಗ್ಲೆಂಡ್ ತಂಡಕ್ಕೆ ತೀವ್ರ ಒತ್ತಡ ಹಾಕುವಲ್ಲಿ ನೆರವಾದರು.
ಪ್ರಸಿದ್ಧ ಕೃಷ್ಣ (4-126)ಅವರು ಜೋಶ್ ಟಂಗ್(0)ಅವರನ್ನು ಕ್ಲೀನ್ ಬೌಲ್ಡ್ ಮಾಡಿದಾಗ ಇಂಗ್ಲೆಂಡ್ ಗೆಲುವಿಗೆ 17 ರನ್ ಅಗತ್ಯವಿತ್ತು. ತನ್ನ ತಂಡಕ್ಕೆ ಪಂದ್ಯ ಗೆಲ್ಲಿಸಿಕೊಡುವ ಉದ್ದೇಶದೊಂದಿಗೆ ಗಾಯಾಳು ಕ್ರಿಸ್ ವೋಕ್ಸ್ ಅವರು ಮೈದಾನಕ್ಕೆ ಇಳಿದು ಎಲ್ಲರನ್ನು ಅಚ್ಚರಿಗೊಳಿಸಿದರು. ಮೊದಲ ದಿನದಾಟದಲ್ಲಿ ಫೀಲ್ಡಿಂಗ್ ವೇಳೆ ವೋಕ್ಸ್ ಅವರು ಬಲ ಭುಜಕ್ಕೆ ಗಾಯವಾಗಿತ್ತು.
ಸಿರಾಜ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸಿದ ಅಟ್ಕಿನ್ಸನ್ ತನ್ನ ತಂಡಕ್ಕೆ ಗೆಲುವಿನ ವಿಶ್ವಾಸ ಹೆಚ್ಚಿಸಿದರು. ಅಟ್ಕಿನ್ಸನ್ ಅವರು ವೋಕ್ಸ್ ಗೆ ಬ್ಯಾಟಿಂಗ್ ಗೆ ಅವಕಾಶ ನೀಡದೆ ತಾನೇ ಬೌಲಿಂಗ್ ದಾಳಿ ಎದುರಿಸಿದರು. ಅಪಾಯಕಾರಿಯಾಗಿ ಕಂಡುಬಂದ ಅಟ್ಕಿನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಸಿರಾಜ್ ಭಾರತದ ಪಾಳಯದಲ್ಲಿ ಸಂಭ್ರಮದ ಹೊನಲು ಹರಿಸಿದರು.
ಇಂದು 5 ವಿಕೆಟ್ ಗೊಂಚಲು ಸಹಿತ ಫೈನಲ್ ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದಿರುವ ಸಿರಾಜ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಒಟ್ಟು 754 ರನ್ ಗಳಿಸಿದ್ದ ಶುಭಮನ್ ಗಿಲ್ ಹಾಗೂ 481 ರನ್ ಗಳಿಸಿದ್ದ ಹ್ಯಾರಿ ಬ್ರೂಕ್ ಸರಣಿಶ್ರೇಷ್ಠ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ಪ್ರಸಕ್ತ ಐದು ಪಂದ್ಯಗಳ ಟೆಸ್ಟ್ ಸರಣಿಯು ಎಲ್ಲ ಐದು ದಿನಗಳ ಕಾಲ ನಡೆದಿದ್ದು ವಿಶೇಷ. 17ನೇ ಬಾರಿ ಟೆಸ್ಟ್ ಸರಣಿಯೊಂದು ಐದು ದಿನಗಳ ಕಾಲ ನಡೆದಿದೆ. 2004ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಕೊನೆಯ ಬಾರಿ ಇದು ನಡೆದಿತ್ತು.