ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ | ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಗೆ; ಪ್ರಣಯ್, ಶ್ರೀಕಾಂತ್ ಸವಾಲು ಅಂತ್ಯ
ಲಕ್ಷ್ಯ ಸೇನ್ | Photo Credit : PTI
ಹೊಸದಿಲ್ಲಿ, ಜ.15: ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸಿರುವ ಲಕ್ಷ್ಯ ಸೇನ್ ಇಂಡಿಯಾ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಗೆ ತಲುಪುವ ಮೂಲಕ ಆತಿಥೇಯ ದೇಶದ ಪ್ರಶಸ್ತಿ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ. ಆದರೆ ಎಚ್.ಎಸ್. ಪ್ರಣಯ್ ಹಾಗೂ ಕಿಡಂಬಿ ಶ್ರೀಕಾಂತ್ ನಿರ್ಣಾಯಕ ಗೇಮ್‌ಗಳಲ್ಲಿ ಸೋಲನುಭವಿಸಿ ಪಂದ್ಯಾವಳಿಯ ಅಂತಿಮ-16ರ ಸುತ್ತಿನಿಂದ ನಿರ್ಗಮಿಸಿದ್ದಾರೆ.
ಲಕ್ಷ್ಯ ಸೇನ್ ಗುರುವಾರ 50 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು 21-19, 21-10 ಗೇಮ್‌ಗಳ ಅಂತರದಿಂದ ಮಣಿಸಿದರು. ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿರುವ ಸೇನ್ ಚೈನೀಸ್ ತೈಪೆಯ ಲಿನ್ ಚುನ್-ಯಿ ಅವರನ್ನು ಎದುರಿಸಲಿದ್ದಾರೆ.
58 ನಿಮಿಷಗಳ ಕಾಲ ನಡೆದ ಮತ್ತೊಂದು ಪುರುಷರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಣಯ್ ಅವರು ಸಿಂಗಾಪುರದ ಮಾಜಿ ವಿಶ್ವ ಚಾಂಪಿಯನ್ ಲೊಹ್ ಕೀನ್ ಯೀವ್ ವಿರುದ್ಧ 21-18, 19-21, 14-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಒಂದು ಗಂಟೆ ಆರು ನಿಮಿಷಗಳ ಕಾಲ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಐದನೇ ಶ್ರೇಯಾಂಕದ ಫ್ರಾನ್ಸ್ ಆಟಗಾರ ಕ್ರಿಸ್ಟೊ ಪೊಪೊವ್ ವಿರುದ್ಧ 14-21, 21-17, 17-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಮಾಳವಿಕಾ ಬಾನ್ಸೋಡ್ ಚೀನಾದ ಐದನೇ ಶ್ರೇಯಾಂಕದ ಹಾನ್ ಯುಇ ವಿರುದ್ಧ 18-21, 15-21 ನೇರ ಗೇಮ್‌ಗಳ ಅಂತರದಿಂದ ಸೋತ ಹಿನ್ನೆಲೆಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.