×
Ad

5ನೇ ಟಿ20 | ಅಭಿಷೇಕ್ ಅಬ್ಬರದ ಬ್ಯಾಟಿಂಗ್, ಭಾರತಕ್ಕೆ ಭರ್ಜರಿ ಜಯ

Update: 2025-02-02 22:35 IST

PC ; PTI 

ಮುಂಬೈ: ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್(135 ರನ್, 54 ಎಸೆತ, 7 ಬೌಂಡರಿ, 13 ಸಿಕ್ಸರ್) ಹಾಗೂ ಮುಹಮ್ಮದ್ ಶಮಿ(3-25) ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ-20 ಇಂಟರ್‌ನ್ಯಾಶನಲ್ ಪಂದ್ಯವನ್ನು 150 ರನ್ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.

ವಾಂಖೆಡೆ ಸ್ಟೇಡಿಯಮ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 9 ವಿಕೆಟ್‌ಗಳ ನಷ್ಟಕ್ಕೆ 247 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡ 10.3 ಓವರ್‌ಗಳಲ್ಲಿ ಕೇವಲ 97 ರನ್‌ಗೆ ಆಲೌಟಾಗಿ ಹೀನಾಯವಾಗಿ ಸೋಲುಂಡಿತು.

ಇಂಗ್ಲೆಂಡ್ ತಂಡವು ಭಾರತ ವಿರುದ್ಧ ಭಾರೀ ರನ್ ಅಂತರದಿಂದ ಸೋತಿರುವ 2ನೇ ಪೂರ್ಣ ಸದಸ್ಯ ದೇಶವಾಗಿದೆ. 2023ರಲ್ಲಿ ಅಹ್ಮದಾಬಾದ್‌ನಲ್ಲಿ ನ್ಯೂಝಿಲ್ಯಾಂಡ್ ಭಾರತ ವಿರುದ್ಧ 168 ರನ್‌ಗಳಿಂದ ಸೋತಿತ್ತು.

ಇಂಗ್ಲೆಂಡ್ ಪರ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್(55 ರನ್, 23 ಎಸೆತ, 7 ಬೌಂಡರಿ,3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಬೆಥೆಲ್(10ರನ್)ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಎರಡಂಕೆಯ ಸ್ಕೋರ್ ಗಳಿಸುವಲ್ಲಿಯೂ ವಿಫಲರಾದರು.

ಶಮಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಅಭಿಷೇಕ್ ಶರ್ಮಾ(2-3), ಶಿವಂ ದುಬೆ(2-11)ಹಾಗೂ ವರುಣ್ ಚಕ್ರವರ್ತಿ(2-25) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

*ಭಾರತ 247/9: ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡವು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 247 ರನ್ ಗಳಿಸಿದೆ.

ಅಭಿಷೇಕ್ ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡರು. ಕೇವಲ 37 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಷೇಕ್ ಕೂದಲೆಳೆ ಅಂತರದಿಂದ ರೋಹಿತ್ ಶರ್ಮಾ(35 ಎಸೆತದಲ್ಲಿ 100)ದಾಖಲೆ ಮುರಿಯುವುದರಿಂದ ವಂಚಿತರಾದರು. ಅಭಿಷೇಕ್ ಟಿ-20 ಇನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು(13) ಸಿಡಿಸಿದ ಭಾರತದ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

ಅಭಿಷೇಕ್, ತಿಲಕ್ ವರ್ಮಾ(24ರನ್)ಅವರೊಂದಿಗೆ 2ನೇ ವಿಕೆಟ್‌ಗೆ 115 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಶಿವಂ ದುಬೆ 30 ರನ್ ಕೊಡುಗೆ ನೀಡಿದರು. ನಾಯಕ ಸೂರ್ಯಕುಮಾರ್(2 ರನ್), ಸ್ಯಾಮ್ಸನ್(16 ರನ್), ಹಾರ್ದಿಕ್ ಪಾಂಡ್ಯ(9 ರನ್), ರಿಂಕು ಸಿಂಗ್(9 ರನ್)ಹಾಗೂ ಅಕ್ಷರ್ ಪಟೇಲ್(15)ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಅಭಿಷೇಕ್ ಏಕಾಂಗಿ ಹೋರಾಟ ನೀಡಿ ವಾಂಖೆಡೆ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಸಿದರು.

ಉಭಯ ತಂಡಗಳು ತಲಾ ಒಂದು ಬದಲಾವಣೆ ಮಾಡಿದ್ದವು. ಭಾರತವು ಅರ್ಷದೀಪ್ ಸಿಂಗ್ ಬದಲಿಗೆ ಮುಹಮ್ಮದ್ ಶಮಿಗೆ ಅವಕಾಶ ನೀಡಿದರೆ, ಇಂಗ್ಲೆಂಡ್ ತಂಡವು ಸಾಕಿಬ್ ಮಹ್ಮೂದ್ ಬದಲಿಗೆ ಮಾರ್ಕ್ ವುಡ್‌ಗೆ ಅವಕಾಶ ನೀಡಿದೆ.

ಟಿ-20 ಕ್ರಿಕೆಟ್: ಭಾರತದ ಗರಿಷ್ಠ ಮೊತ್ತಗಳು

297/6: ಬಾಂಗ್ಲಾದೇಶ ವಿರುದ್ಧ, ಹೈದರಾಬಾದ್, 2024

283/1: ದ.ಆಫ್ರಿಕಾ ವಿರುದ್ಧ, ಜೋಹಾನ್ಸ್‌ಬರ್ಗ್, 2024

260/5: ಶ್ರೀಲಂಕಾದ ವಿರುದ್ಧ ಇಂದೋರ್, 2017

247/9: ಇಂಗ್ಲೆಂಡ್ ವಿರುದ್ಧ ಮುಂಬೈ, 2025

17 ಎಸೆತಗಳಲ್ಲಿ ಅರ್ಧಶತಕ

ಅಭಿಷೇಕ್ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಈ ಸಾಧನೆ ಮಾಡಿದ ಭಾರತದ 2ನೇ ಬ್ಯಾಟರ್ ಎನಿಸಿಕೊಂಡರು. ವೇಗಿ ಓವರ್ಟನ್ ಎಸೆತದಲ್ಲಿ ಸತತ ಸಿಕ್ಸರ್‌ಗಳನ್ನು ಸಿಡಿಸಿದ ಅಭಿಷೇಕ್ 5ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿದರು.

ಯುವರಾಜ್ ಸಿಂಗ್ 2007ರಲ್ಲಿ ಡರ್ಬನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ 50 ರನ್ ಪೂರೈಸಿದ್ದರು.

ಕೆ.ಎಲ್.ರಾಹುಲ್(18 ಎಸೆತ)ಹಾಗೂ ಸೂರ್ಯಕುಮಾರ್(18 ಎಸೆತ)ವೇಗವಾಗಿ ಅರ್ಧಶತಕ ಗಳಿಸಿದ ಇನ್ನಿಬ್ಬರು ಆಟಗಾರರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News