×
Ad

ಮಹಿಳೆಯರ ತ್ರಿಕೋನ ಏಕದಿನ ಸರಣಿ ಗೆದ್ದ ಭಾರತ : ಫೈನಲ್ ನಲ್ಲಿ ಶ್ರೀಲಂಕಾದ ವಿರುದ್ಧ 97 ರನ್ ಜಯ

Update: 2025-05-11 21:52 IST

Photo : x.com/ICC

ಕೊಲಂಬೊ: ಸಂಪೂರ್ಣ ಪ್ರಾಬಲ್ಯ ಮೆರೆದಿರುವ ಭಾರತದ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ತಂಡವನ್ನು 97 ರನ್ ಅಂತರದಿಂದ ಮಣಿಸುವ ಮೂಲಕ ವನಿತೆಯರ ತ್ರಿಕೋನ ಏಕದಿನ ಸರಣಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಉಪ ನಾಯಕಿ ಸ್ಮೃತಿ ಮಂಧಾನ ಸಿಡಿಸಿದ ಆಕರ್ಷಕ ಶತಕ ಹಾಗೂ ಬೌಲರ್ಗಳ ಒಗ್ಗಟ್ಟಿನ ಪ್ರಯತ್ನದ ಫಲವಾಗಿ ಭಾರತ ವಿಜಯಶಾಲಿಯಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 7 ವಿಕೆಟ್ಗಳ ನಷ್ಟಕ್ಕೆ 342 ರನ್ ಗಳಿಸಿತು. ಸ್ನೇಹ ರಾಣಾ(4-38) ಹಾಗೂ ಅಮನ್ಜೋತ್ ಕೌರ್(3-54)ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿ ಶ್ರೀಲಂಕಾ ತಂಡವನ್ನು 48.2 ಓವರ್ಗಳಲ್ಲಿ 245 ರನ್ಗೆ ಕಟ್ಟಿಹಾಕಿದರು.

ನಾಯಕಿ ಚಾಮರಿ ಅಥಪಟ್ಟು(51 ರನ್, 66 ಎಸೆತ)ಹಾಗೂ ನೀಲಾಕ್ಷಿಕ ಸಿಲ್ವ (48 ರನ್, 58 ಎಸೆತ)ಆತಿಥೇಯರ ಪರ ಮಹತ್ವದ ಕೊಡುಗೆ ನೀಡಿದರೂ ಇದು ಗೆಲುವಿಗೆ ಸಾಕಾಗಲಿಲ್ಲ.

ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಫಾರ್ಮ್ಗೆ ಮರಳಿದ್ದ ಎಡಗೈ ಬ್ಯಾಟರ್ ಮಂಧಾನ ಇಂದು 101 ಎಸೆತಗಳಲ್ಲಿ 116 ರನ್ ಗಳಿಸಿ ಭಾರತದ ದೊಡ್ಡ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಮಂಧಾನ ಅವರು ಇನಿಂಗ್ಸ್ನಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್ಗಳಿದ್ದವು. ಅಥಪಟ್ಟು ಬೌಲಿಂಗ್ನಲ್ಲಿ ಸತತ 4 ಬೌಂಡರಿಗಳನ್ನು ಗಳಿಸಿರುವ ಮಂಧಾನ ತನ್ನದೇ ಶೈಲಿಯಲ್ಲಿ ಏಕದಿನ ಕ್ರಿಕೆಟ್ನಲ್ಲಿ 11ನೇ ಶತಕ ಪೂರೈಸಿದರು.

21 ರನ್ ಗಳಿಸಿದ್ದಾಗ ಶ್ರೀಲಂಕಾದಿಂದ ಜೀವದಾನ ಪಡೆದಿದ್ದ ಮಂಧಾನ ಎರಡು ನಿರ್ಣಾಯಕ ಜೊತೆಯಾಟದಲ್ಲಿ ಭಾಗಿಯಾದರು.

ಪ್ರತಿಕಾ ರಾವಲ್(30 ರನ್)ಅವರೊಂದಿಗೆ ಮೊದಲ ವಿಕೆಟ್ಗೆ 70 ರನ್ ಸೇರಿಸಿದ ಮಂಧಾನ ಅವರು ಹರ್ಲೀನ್ ಡೆವೊಲ್ ಜೊತೆಗೆ 2ನೇ ವಿಕೆಟ್ಗೆ 120 ರನ್ ಸೇರಿಸಿದರು.

ತನ್ನ 32ನೇ ಅರ್ಧಶತಕ ಗಳಿಸಿದ ಮಂಧಾನ ಅವರು ಹರ್ಲೀನ್(47 ರನ್, 56 ಎಸೆತ, 4 ಬೌಂಡರಿ)ಅವರೊಂದಿಗೆ 2ನೇ ವಿಕೆಟ್ಗೆ 106 ಎಸೆತಗಳಲ್ಲಿ 120 ರನ್ ಸೇರಿಸಿ ಇನಿಂಗ್ಸ್ ಆಧರಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಜೀವನಶ್ರೇಷ್ಠ ಇನಿಂಗ್ಸ್(123 ರನ್)ಆಡಿದ ಜೆಮಿಮಾ ರೊಡ್ರಿಗಸ್ ಫೈನಲ್ ಪಂದ್ಯದಲ್ಲಿ 29 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 44 ರನ್ ಗಳಿಸಿ ಇನಿಂಗ್ಸ್ಗೆ ಮತ್ತಷ್ಟು ಬಲ ತುಂಬಿದರು. ನಾಯಕಿ ಹರ್ಮನ್ಪ್ರೀತ್ ಕೂಡ 30 ಎಸೆತಗಳಲ್ಲಿ 41ರನ್(4 ಬೌಂಡರಿ, 1 ಸಿಕ್ಸರ್)ಗಳಿಸಿದರು. ಭಾರತವು ಕೊನೆಯ 10 ಓವರ್ಗಳಲ್ಲಿ 90 ರನ್ ಕಲೆ ಹಾಕಿತು.

ಕೊನೆಯ ಓವರ್ಗಳಲ್ಲಿ ಭಾರತವು ಕೆಲವು ವಿಕೆಟ್ಗಳನ್ನು ಕಳೆದುಕೊಂಡರೂ ದೀಪ್ತಿ ಶರ್ಮಾ(ಔಟಾಗದೆ 20, 14 ಎಸೆತ)ಹಾಗೂ ಅಮನ್ಜೋತ್ ಕೌರ್(18 ರನ್, 12 ಎಸೆತ)ಭಾರತ ತಂಡದ ಸ್ಕೋರನ್ನು 340ರ ಗಡಿ ದಾಟಿಸಿದರು.

ಶ್ರೀಲಂಕಾದ ಪರ ಸುಗಂಧಿಕಾ ಕುಮಾರಿ(2-59), ದೇವ್ಮಿ ವಿಹಾಂಗ(2-69) ಹಾಗೂ ಮಲ್ಕಿ ಮದರ(2-74)ತಲಾ ಎರಡು ವಿಕೆಟ್ಗಳನ್ನು ಪಡೆದರು.

ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭದ ಅಗತ್ಯವಿತ್ತು. ಆದರೆ ಅದು ತನ್ನ ಇನಿಂಗ್ಸ್ನ 3ನೇ ಎಸೆತದಲ್ಲಿ ಹಸಿನಿ ಪೆರೇರ(0) ವಿಕೆಟನ್ನು ಕಳೆದುಕೊಂಡಿತು. ಆಗ ಶ್ರೀಲಂಕಾ ಒಂದೂ ರನ್ ಕೂಡ ಗಳಿಸಿರಲಿಲ್ಲ. ನಾಯಕಿ ಅಥಪಟ್ಟು ಹಾಗೂ ವಿಶ್ಮಿ ಗುಣರತ್ನೆ(36 ರನ್) 2ನೇ ವಿಕೆಟ್ಗೆ 68 ರನ್ ಸೇರಿಸಿ ಆತಿಥೇಯರು ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಳ್ಳಲು ನೆರವಾದರು. ಸೀನಿಯರ್ ಆಫ್ ಸ್ಪಿನ್ನರ್ ದೀಪ್ತಿ ಸತತ 3 ಓವರ್ಗಳಲ್ಲಿ ಹೆಚ್ಚು ರನ್ ನೀಡದೆ ಎದುರಾಳಿ ತಂಡಕ್ಕೆ ಒತ್ತಡ ಹೇರಿದರು. ವಿಶ್ಮಿ ಅವರನ್ನು ಕ್ಲೀನ್ಬೌಲ್ಡ್ ಮಾಡಿದ ಅಮನ್ಜೋತ್ ಭಾರತಕ್ಕೆ ಮತ್ತೊಂದು ಮುನ್ನಡೆ ಒದಗಿಸಿದರು.

ಅಥಪಟ್ಟು (51 ರನ್, 66 ಎಸೆತ, 6 ಬೌಂಡರಿ, 1 ಸಿಕ್ಸರ್)ಅರ್ಧಶತಕ ಗಳಿಸಿದ ಬೆನ್ನಿಗೇ ರಾಣಾಗೆ ವಿಕೆಟ್ ಒಪ್ಪಿಸಿದರು. ಅಗತ್ಯದ ರನ್ರೇಟ್ ಏರಿಕೆಯಾಗುತ್ತಿದ್ದಂತೆ ರಾಣಾ ಅವರು ನೀಲಾಕ್ಷಿತಾ ಸಿಲ್ವಾ (48 ರನ್, 58 ಎಸೆತ, 5 ಬೌಂಡರಿ) ವಿಕೆಟನ್ನು ಉರುಳಿಸಿ ಭಾರತಕ್ಕೆ ಗೆಲುವು ಧೃಢಪಡಿಸಿದರು.

ಹರ್ಷಿತಾ ಸಮರವಿಕ್ರಮ(26 ರನ್, 32 ಎಸೆತ)ಅಮನ್ಜೋತ್ಗೆ ಮೂರನೇ ಬಲಿಯಾದರು. ಅನುಷ್ಕಾ ಸಂಜೀವನಿ(28 ರನ್)ಹಾಗೂ ಸುಗಂಧಿಕಾ ಕುಮಾರಿ(27 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಶತಕ ಗಳಿಸಿರುವ ಸ್ಮೃತಿ ಮಂಧಾನ ಪಂದ್ಯಶ್ರೇಷ್ಠ ಹಾಗೂ ಸರಣಿಯಲ್ಲಿ ಒಟ್ಟು 15 ವಿಕೆಟ್ಗಳನ್ನು ಪಡೆದ ಸ್ನೇಹ ರಾಣಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ: 50 ಓವರ್ಗಳಲ್ಲಿ 342/7

(ಸ್ಮೃತಿ ಮಂಧಾನ 116, ಹರ್ಲೀನ್ ಡೆವೊಲ್ 47, ಜೆಮಿಮಾ ರೊಡ್ರಿಗಸ್ 44, ಹರ್ಮನ್ಪ್ರೀತ್ ಕೌರ್ 41, ಸುಗಂಧಿಕಾ 2-59, ವಿಹಾಂಗ 2-69, ಮಲ್ಕಿ ಮದರ 2-74)

ಶ್ರೀಲಂಕಾ: 48.2 ಓವರ್ಗಳಲ್ಲಿ 245 ರನ್ಗೆ ಆಲೌಟ್

(ಚಾಮರಿ ಅಥಪಟ್ಟು 51, ನೀಲಾಕ್ಷಿಕಾ ಸಿಲ್ವ 48, ವಿಶ್ಮಿ ಗುಣರತ್ನೆ 36, ಸ್ನೇಹ ರಾಣಾ 4-38, ಅಮನ್ಜೋತ್ ಕೌರ್ 3-54)

ಪಂದ್ಯಶ್ರೇಷ್ಠ: ಸ್ಮೃತಿ ಮಂಧಾನ

ಸರಣಿಶ್ರೇಷ್ಠ: ಸ್ನೇಹ ರಾಣಾ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News