×
Ad

IPL 2026 | ರಾಜಸ್ಥಾನದ ವಿರುದ್ಧ ಗುಜರಾತ್ ಟೈಟಾನ್ಸ್‌ಗೆ ಜಯ

ಶುಭಮನ್ ಗಿಲ್, ಸಾಯಿ ಸುದರ್ಶನ್ ಅರ್ಧಶತಕ, ರಶೀದ್ ಖಾನ್‌ ಗೆ ನಾಲ್ಕು ವಿಕೆಟ್

Update: 2026-05-09 23:37 IST

Photo Credit : PTI 

ಜೈಪುರ, ಮೇ 9: ನಾಯಕ ಶುಭಮನ್ ಗಿಲ್ (84 ರನ್, 44 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಸಾಯಿ ಸುದರ್ಶನ್ (55 ರನ್, 36 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಕೊಡುಗೆ, ರಶೀದ್ ಖಾನ್ (4-33), ಜೇಸನ್ ಹೋಲ್ಡರ್ (3-12) ಹಾಗೂ ಕಾಗಿಸೊ ರಬಾಡ (2-33) ಅವರ ಅಮೋಘ ಬೌಲಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 77 ರನ್‌ಗಳ ಅಂತರದಿಂದ ಮಣಿಸಿದೆ.

ಈ ಗೆಲುವಿನ ಮೂಲಕ ಗುಜರಾತ್ ತಂಡವು 11ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿ ಒಟ್ಟು 14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ರಾಜಸ್ಥಾನ ತಂಡ ಐದನೇ ಸೋಲು ಕಂಡು ಐದನೇ ಸ್ಥಾನಕ್ಕೆ ಕುಸಿದಿದೆ.

ಶನಿವಾರ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ 52ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್ ತಂಡವು ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 229 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ರಾಜಸ್ಥಾನ ತಂಡವು 16.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟಾಯಿತು.

ವೈಭವ್ ಸೂರ್ಯವಂಶಿ (36 ರನ್, 16 ಎಸೆತ), ರವೀಂದ್ರ ಜಡೇಜ (38 ರನ್, 25 ಎಸೆತ), ಧ್ರುವ ಜುರೆಲ್ (24 ರನ್, 10 ಎಸೆತ), ಶುಭಮ್ ದುಬೆ (15 ರನ್, 14 ಎಸೆತ) ಹಾಗೂ ದಸುನ್ ಶನಕ (16 ರನ್, 11 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.

ರಶೀದ್ ಖಾನ್ ಯಶಸ್ವಿ ಪ್ರದರ್ಶನ ನೀಡಿದರೆ, ಜೇಸನ್ ಹೋಲ್ಡರ್ (3-12) ಹಾಗೂ ಕಾಗಿಸೊ ರಬಾಡ (2-33) ರಶೀದ್‌ಗೆ ಉತ್ತಮ ಸಾಥ್ ನೀಡಿದರು.

ಇದಕ್ಕೂ ಮೊದಲು ಗುಜರಾತ್ ತಂಡದ ಇನಿಂಗ್ಸ್ ಆರಂಭಿಸಿದ ಸುದರ್ಶನ್ ಹಾಗೂ ಗಿಲ್ ಮೊದಲ ವಿಕೆಟ್‌ಗೆ 10.5 ಓವರ್‌ಗಳಲ್ಲಿ 118 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಯಶ್ ರಾಜ್ ಪೂಂಜಾ (1-37) ಸುದರ್ಶನ್ ವಿಕೆಟ್ ಪಡೆದು ಈ ಜೋಡಿಯನ್ನು ಬೇರ್ಪಡಿಸಿದರು.

ಜೋಸ್ ಬಟ್ಲರ್ (13 ರನ್) ಹಾಗೂ ಜೇಸನ್ ಹೋಲ್ಡರ್ (7 ರನ್) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ವಾಶಿಂಗ್ಟನ್ ಸುಂದರ್ (ಔಟಾಗದೆ 37, 20 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ರಾಹುಲ್ ಟೆವಾಟಿಯಾ (ಔಟಾಗದೆ 14, 4 ಎಸೆತ) ಗುಜರಾತ್ ತಂಡದ ಸ್ಕೋರನ್ನು 229ಕ್ಕೆ ತಲುಪಿಸಿದರು.

ರಾಜಸ್ಥಾನದ ಪರ ಬ್ರಿಜೇಶ್ ಶರ್ಮಾ (2-47) ಯಶಸ್ವಿ ಪ್ರದರ್ಶನ ನೀಡಿದರು. ರವೀಂದ್ರ ಜಡೇಜ (1-34) ಹಾಗೂ ಯಶ್ ರಾಜ್ ಪೂಂಜಾ ತಲಾ ಒಂದು ವಿಕೆಟ್ ಪಡೆದರು.

►ಸಂಕ್ಷಿಪ್ತ ಸ್ಕೋರ್

ಗುಜರಾತ್ ಟೈಟಾನ್ಸ್: 20 ಓವರ್‌ಗಳಲ್ಲಿ 229/4

(ಶುಭಮನ್ ಗಿಲ್ 84, ಸಾಯಿ ಸುದರ್ಶನ್ 55, ವಾಶಿಂಗ್ಟನ್ ಸುಂದರ್ ಔಟಾಗದೆ 37, ಬ್ರಿಜೇಶ್ ಶರ್ಮಾ 2-47, ಜಡೇಜ 1-34, ಯಶ್ ರಾಜ್ ಪೂಂಜಾ 1-37)

►ರಾಜಸ್ಥಾನ ರಾಯಲ್ಸ್: 16.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್

(ರವೀಂದ್ರ ಜಡೇಜ 38, ವೈಭವ್ ಸೂರ್ಯವಂಶಿ 36, ಧ್ರುವ ಜುರೆಲ್ 24, ರಶೀದ್ ಖಾನ್ 4-33, ಕಾಗಿಸೊ ರಬಾಡ 2-33, ಜೇಸನ್ ಹೋಲ್ಡರ್ 3-12)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News