×
Ad

ಡೋಪಿಂಗ್ ಪರೀಕ್ಷೆಗಳಿಗೆ ಗೈರು | ಯಶಸ್ವಿ ಜೈಸ್ವಾಲ್, ಶೆಫಾಲಿ ವರ್ಮಾಗೆ ನಾಡಾ ನೋಟಿಸ್

Update: 2026-05-09 22:00 IST

 ಯಶಸ್ವಿ ಜೈಸ್ವಾಲ್, ಶೆಫಾಲಿ ವರ್ಮಾ | Photo Credit ; PTI 

ಹೊಸದಿಲ್ಲಿ, ಮೇ 9: ಕಳೆದ ವರ್ಷ ನಿಗದಿತ ಡೋಪಿಂಗ್ ಪರೀಕ್ಷೆಗಳಿಗೆ ಗೈರುಹಾಜರಾಗಿದ್ದ ಕ್ರಿಕೆಟಿಗರಾದ ಯಶಸ್ವಿ ಜೈಸ್ವಾಲ್ ಹಾಗೂ ಶೆಫಾಲಿ ವರ್ಮಾ ಅವರು ಭಾರತದ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ)ದಿಂದ ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ.

ಈ ಇಬ್ಬರು ಕ್ರಿಕೆಟಿಗರು ನಾಡಾದ ರಿಜಿಸ್ಟರ್ಡ್ ಟೆಸ್ಟಿಂಗ್ ಪೂಲ್‌ನ (ಆರ್‌ಟಿಪಿ) ಭಾಗವಾಗಿದ್ದಾರೆ. ಹೀಗಾಗಿ ಅವರು ತಾವೆಲ್ಲಿದ್ದೇವೆ ಎಂಬ ಬಗ್ಗೆ ನಿರಂತರ ಮಾಹಿತಿ ನೀಡಬೇಕಾಗುತ್ತದೆ ಹಾಗೂ ಪ್ರತಿದಿನ ನಿರ್ದಿಷ್ಟ ಸಮಯದಲ್ಲಿ ಅಚ್ಚರಿಯ ಪರೀಕ್ಷೆಗೆ ಲಭ್ಯವಿರಬೇಕಾಗುತ್ತದೆ.

ಮೂಲಗಳ ಪ್ರಕಾರ, ಈ ಇಬ್ಬರು ಕ್ರಿಕೆಟಿಗರು ತಮ್ಮ ನಿಗದಿತ ಟೆಸ್ಟ್‌ಗಳಿಗೆ ಲಭ್ಯವಿರಲಿಲ್ಲ. ಪರೀಕ್ಷೆಗಳಿಂದ ತಪ್ಪಿಸಿಕೊಂಡಿದ್ದಕ್ಕೆ ನಾಡಾಕ್ಕೆ ವಿವರಣೆಗಳನ್ನು ನೀಡಿಲ್ಲ.

‘‘ಸಂಬಂಧಪಟ್ಟ ಕ್ರೀಡಾಪಟುಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ರಾಷ್ಟ್ರೀಯ ಒಕ್ಕೂಟ (ಬಿಸಿಸಿಐ) ಹಾಗೂ ಐಸಿಸಿಗೂ ಈ ಕುರಿತು ಮಾಹಿತಿ ನೀಡಲಾಗಿದೆ’’ ಎಂದು ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.

ಡೋಪಿಂಗ್ ವಿರೋಧಿ ನಿಯಮಗಳ ಪ್ರಕಾರ ಆರ್‌ಟಿಪಿಯಲ್ಲಿರುವ ಅಥ್ಲೀಟ್‌ಗಳು ತಾವಿರುವ ಸ್ಥಳದ ಬಗ್ಗೆ ನಿರಂತರವಾಗಿ ವಿವರಣೆಗಳನ್ನು ನೀಡುತ್ತಲೇ ಇರಬೇಕಾಗುತ್ತದೆ. ಇದರಿಂದ ಪರೀಕ್ಷಕರು ಯಾವುದೇ ಸಮಯದಲ್ಲಿ ಕ್ರೀಡಾಪಟುಗಳನ್ನು ತಲುಪಬಹುದು. ಒಂದು ಟೆಸ್ಟ್‌ನಿಂದ ತಪ್ಪಿಸಿಕೊಂಡರೆ, ಎಚ್ಚರಿಕೆ ನೀಡಲಾಗುತ್ತದೆ. ನಿರ್ದಿಷ್ಟ ಅವಧಿಯೊಳಗೆ ಅಂತಹ ಮೂರು ಪರೀಕ್ಷೆಗಳಿಗೆ ಹಾಜರಾಗಲು ವಿಫಲರಾದರೆ, ಅದನ್ನು ಡೋಪಿಂಗ್ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅಮಾನತುಗೊಳಿಸುವ ಸಾಧ್ಯತೆಯೂ ಇದೆ.

ನಾಡಾದಿಂದ ಅಧಿಸೂಚನೆಯನ್ನು ಸ್ವೀಕರಿಸಿರುವುದನ್ನು ದೃಢಪಡಿಸಿರುವ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಈ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದೆ.

‘ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದಕ್ಕಾಗಿ ನಾಡಾದಿಂದ ನಮಗೆ ಅಧಿಸೂಚನೆ ಬಂದಿದೆ. ಇದು ಹೇಗೆ ಆಯಿತು ಎಂಬುದರ ಕುರಿತು ನಾವು ಅವರೊಂದಿಗೆ ಮಾತನಾಡುತ್ತೇವೆ. ಭವಿಷ್ಯದಲ್ಲಿ ಅಂತಹ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

2028ರ ಲಾಸ್ ಏಂಜಲೀಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಒಲಿಂಪಿಕ್ಸ್‌ಗೆ ಮರಳುತ್ತಿರುವುದರಿಂದ ಈ ವಿಷಯ ಹೆಚ್ಚು ಗಮನ ಸೆಳೆದಿದೆ. ಇದು ಕಟ್ಟುನಿಟ್ಟಾದ ಡೋಪಿಂಗ್ ವಿರೋಧಿ ಅನುಸರಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಿದೆ.

ಸದ್ಯ ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ ಹಾಗೂ ರಿಷಭ್ ಪಂತ್ ಸೇರಿದಂತೆ ಭಾರತದ 13 ಕ್ರಿಕೆಟಿಗರು ನಾಡಾದ ಆರ್‌ಟಿಪಿ ಪಟ್ಟಿಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News