ಅಬುಧಾಬಿಯಲ್ಲಿ 2026ರ ಆವೃತ್ತಿಯ ಐಪಿಎಲ್ ನ ಮಿನಿ ಹರಾಜು?
Photo Credit : X
ಹೊಸದಿಲ್ಲಿ, ನ.10: 2026ರ ಆವೃತ್ತಿಯ ಐಪಿಎಲ್ ಟೂರ್ನಿಗಾಗಿ ಮಿನಿ ಹರಾಜು ಅಬುಧಾಬಿಯಲ್ಲಿ ಡಿಸೆಂಬರ್‌ನ 3ನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.
ಹರಾಜು ಪ್ರಕ್ರಿಯೆ ನಡೆಸಲು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಡಿಸೆಂಬರ್ 15-16 ದಿನಾಂಕವನ್ನು ಗುರುತಿಸಿದೆ. ಈ ಮೂಲಕ ಸತತ ಮೂರನೇ ವರ್ಷವೂ ವಿದೇಶಿ ನೆಲದಲ್ಲಿ ಐಪಿಎಲ್ ಹರಾಜು ಕಾರ್ಯಕ್ರಮ ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಕಳೆದೆರಡು ಐಪಿಎಲ್ ಹರಾಜುಗಳು ಕ್ರಮವಾಗಿ ಜಿದ್ದಾ, ಸೌದಿ ಅರೇಬಿಯ ಹಾಗೂ ದುಬೈನಲ್ಲಿ ನಡೆದಿದ್ದವು. ಈ ಬಾರಿ ಅಬುಧಾಬಿಯು ಮಿನಿ ಹರಾಜಿನ ಆತಿಥ್ಯವನ್ನು ವಹಿಸಲು ಸಜ್ಜಾಗಿದೆ.
ಭಾರತದಲ್ಲಿ ಐಪಿಎಲ್ ಹರಾಜು ನಡೆಸಬೇಕೆಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ, ವಿದೇಶದಲ್ಲಿ ಐಪಿಎಲ್ ಹರಾಜು ನಡೆಸುವ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ.
ಸಂಜು ಸ್ಯಾಮ್ಸನ್ ಸಿಎಸ್‌ಕೆ ಪಾಲಾಗುವ ನಿರೀಕ್ಷೆ ಇದೆ. ಮುಂದಿನ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ರವೀಂದ್ರ ಜಡೇಜರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಬಹುದು.
ಮಹಿಳೆಯರ ಪ್ರೀಮಿಯರ್ ಲೀಗ್‌ನ ಹರಾಜು ಕಾರ್ಯಕ್ರಮವು ನವೆಂಬರ್ 27ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ.