ಮಲೇಶ್ಯ ಮಾಸ್ಟರ್ಸ್: ಪ್ರಣಯ್, ಕರುಣಾಕರನ್‌ಗೆ ಜಯ
ಎಚ್.ಎಸ್. ಪ್ರಣಯ್ | PC : NDTV
ಕೌಲಾಲಂಪುರ, ಮೇ 21: ಮಲೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್. ಪ್ರಣಯ್ ಹಾಗೂ ಸತೀಶ್ ಕರುಣಾಕರನ್ ಎರಡನೇ ಸುತ್ತಿಗೆ ತಲುಪಿದ್ದಾರೆ. ಆದರೆ, ಡಬಲ್ಸ್ ಒಲಿಂಪಿಕ್ಸ್ ಮೆಡಲಿಸ್ಟ್ ಪಿ.ವಿ. ಸಿಂಧು ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
ಪ್ರಣಯ್ ಒಂದು ಗಂಟೆ ಹಾಗೂ 22 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಠಿಣ ಹೋರಾಟ ನೀಡಿ ಜಪಾನಿನ 5ನೇ ಶ್ರೇಯಾಂಕದ ಕೆಂಟಾ ನಿಶಿಮೊಟೊ ವಿರುದ್ಧ 19-21, 21-17, 21-16 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.
ಕೇವಲ 39 ನಿಮಿಷಗಳಲ್ಲಿ ಕೊನೆಗೊಂಡಿರುವ ಪಂದ್ಯದಲ್ಲಿ ಕರುಣಾಕರನ್ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್‌ರನ್ನು 21-13, 21-14 ಗೇಮ್‌ಗಳ ಅಂತರದಿಂದ ಮಣಿಸಿದರು.
ಭಾರತದ ಪುರುಷ ಶಟ್ಲರ್‌ಗಳ ಪಾಲಿಗೆ ಬುಧವಾರ ಶುಭದಿನವಾಗಿದ್ದು, ಆಯುಷ್ ಶೆಟ್ಟಿ ಕೂಡ ಕೆನಡಾದ ಬ್ರಿಯಾನ್ ಯಂಗ್‌ರನ್ನು 20-22, 21-10, 21-8 ಗೇಮ್‌ಗಳ ಅಂತರದಿಂದ ಸೋಲಿಸಿದರು.
ಸಿಂಧು ಅವರು ತನ್ನ ಕಳಪೆ ಫಾರ್ಮ್ ಮುಂದುವರಿಸಿದ್ದು, ವಿಯೆಟ್ನಾಂನ ಯೆನ್ ಥುಯ್ ಲಿನ್ಹ್ ಎದುರು 11-21, 21-14, 15-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿ ಸೂಪರ್-500 ಟೂರ್ನಮೆಂಟ್‌ನ ಮೊದಲ ಸುತ್ತು ದಾಟುವಲ್ಲಿ ವಿಫಲರಾದರು.