×
Ad

ಕೆಸಿಎಲ್ ಟೂರ್ನಿ: 42 ಎಸೆತಗಳಲ್ಲಿ ಶತಕ ದಾಖಲಿಸಿ, ಏಷ್ಯಾಕಪ್ ಗೆ ಪ್ರಬಲ ಸಂದೇಶ ರವಾನಿಸಿದ ಸಂಜು ಸ್ಯಾಮ್ಸನ್

Update: 2025-08-25 08:59 IST

PC: x.com/CricCrazyJohns

ಕೊಚ್ಚಿನ್: ಕೇರಳ ಕ್ರಿಕೆಟ್ ಲೀಗ್ ನಲ್ಲಿ ಭಾನುವಾರ ಸ್ಫೋಟಕ ಶತಕ ಬಾರಿಸಿದ ಯುವ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್, ಮುಂಬರುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಆಡುವ 11ರ ಬಳಗಕ್ಕೆ ತಾವು ಪ್ರಬಲ ಆಕಾಂಕ್ಷಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಕೊಚ್ಚಿ ಬ್ಲೂ ಟೈಗರ್ ತಂಡದ ಉಪನಾಯಕನಾಗಿರುವ ವಿಕೆಟ್ ಕೀಪರ್- ಬ್ಯಾಟ್ಸ್ಮನ್, 236 ರನ್ ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಆರಂಭಿಕ ಆಟಗಾರನಾಗಿ ಕ್ರೀಸ್ ಗೆ ಬಂದರು. 42 ಎಸೆತಗಳಲ್ಲಿ ಶತಕ ಗಳಿಸುವ ಮುನ್ನ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಒತ್ತಡದ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸುವ ತಮ್ಮ ಸಾಮರ್ಥ್ಯವನ್ನು ದೃಢಪಡಿಸಿದರು. ಜತೆಗೆ ಆರಂಭಿಕನಾಗಿಯೂ ಆಡಬಲ್ಲೆ ಎನ್ನುವುದನ್ನು ಶ್ರುತಪಡಿಸಿದರು. ಈ ಹಿಂದೆ ಅವರು ಆರನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಕ್ರೀಸ್ಗೆ ಬರುತ್ತಿದ್ದರು.

ರಾಷ್ಟ್ರೀಯ ತಂಡದಲ್ಲಿ ಸ್ಯಾಮ್ಸನ್ ಪಾತ್ರದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಭಾರತದ ಟಿ20 ತಂಡಕ್ಕೆ ಶುಭಮನ್ ಗಿಲ್ ಉಪನಾಯಕನಾಗಿ ಆಗಮಿಸಿದ್ದು, ಏಷ್ಯಾ ಕಪ್ ನಲ್ಲಿ ಭಾರತದ ಆರಂಭಿಕ ಜೋಡಿಯ ಬಗ್ಗೆ ಕೂಡಾ ಕುತೂಹಲ ಮೂಡಿದೆ.

ಭಾರತದ ಮಾಜಿ ನಾಯಕ ಅಜಿಂಕ್ಯ ರಹಾನೆ ಪ್ರಕಾರ, ಅಭಿಷೇಕ್ ಶರ್ಮಾ ಮತ್ತು ಗಿಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಅದ್ಭುತ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಆಡುವ 11ರ ಬಳಗದಲ್ಲಿ ಇರಬೇಕು ಎನ್ನುವುದು ನನ್ನ ಬಯಕೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಆಕಾಶ್ ಛೋಪ್ರಾ ಇದಕ್ಕೆ ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಎಲ್ಲ ವಿಧದ ಕ್ರಿಕೆಟ್ಗೆ ಒಬ್ಬನೇ ನಾಯಕನನ್ನು ನೇಮಿಸುವ ನಿಟ್ಟಿನಲ್ಲಿ ಭಾರತ ಸಾಗುತ್ತಿದೆ. ಶುಭಮನ್ ಗಿಲ್ ಮರಳಿರುವುದರಿಂದ ಸಂಜು ಸ್ಯಾಮ್ಸನ್ ಅವರ ಭವಿಷ್ಯ ಮುಚ್ಚಿಹೋಗಿದೆ ಎನಿಸುತ್ತದೆ. ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಾರರು. ತಿಲಕ್ ವರ್ಮಾ ಅಥವಾ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುವಂತಿಲ್ಲ ಎಂದಾದಲ್ಲಿ ಸಂಜು ಹೊರಗುಳಿದು ಜಿತೇಶ್ ಶರ್ಮಾ ಮತ್ತೆ ಮೈದಾನಕ್ಕೆ ಇಳಿಯುವ ಸಾಧ್ಯತೆ ಇದೆ" ಎಂದು ಛೋಪ್ರಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News