ಐಪಿಎಲ್‌ನ ಅತ್ಯಂತ ದುಬಾರಿ ಬೌಲರ್‌ಗಳ ಪಟ್ಟಿಗೆ ಖಲೀಲ್ ಅಹ್ಮದ್ ಸೇರ್ಪಡೆ
ಖಲೀಲ್ ಅಹ್ಮದ್ | PC : PTI
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಖಲೀಲ್ ಅಹ್ಮದ್ ಎಂ.ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಶನಿವಾರ ನಡೆದ ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 33 ರನ್ ಬಿಟ್ಟುಕೊಟ್ಟರು. ಈ ಮೂಲಕ 2025ರ ಆವೃತ್ತಿಯ ಐಪಿಎಲ್‌ನಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲರ್‌ಗಳ ಪಟ್ಟಿಯಲ್ಲಿ ರವಿ ಬೋಪಾರ ಹಾಗೂ ಪರ್ವಿಂದರ್ ಅವಾನರೊಂದಿಗೆ 5ನೇ ಸ್ಥಾನ ಹಂಚಿಕೊಂಡಿದ್ದಾರೆ.
ಮೊದಲ ಇನಿಂಗ್ಸ್ನ 19ನೇ ಓವರ್‌ನಲ್ಲಿ ಖಲೀಲ್ ಈ ದುಬಾರಿ ಓವರ್ ಎಸೆದರು. ಆರ್‌ಸಿಬಿ ಬ್ಯಾಟರ್ ರೊಮಾರಿಯೊ ಶೆಫರ್ಡ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, 3 ಸಿಕ್ಸರ್ ಹಾಗೂ 2 ಬೌಂಡರಿಗಳ ಸಹಿತ 33 ರನ್ ಗಳಿಸಿದರು. ಇದರಲ್ಲಿ ಒಂದು ನೋ-ಬಾಲ್ ಕೂಡ ಇತ್ತು.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ದಾಖಲೆಯು ಪ್ರಶಾಂತ್ ಪರಮೇಶ್ವರನ್ ಹಾಗೂ ಹರ್ಷಲ್ ಪಟೇಲ್ ಅವರ ಹೆಸರಲ್ಲಿದೆ. ಈ ಇಬ್ಬರು ಒಂದೇ ಓವರ್ನಲ್ಲಿ 37ರನ್ ನೀಡಿದ್ದರು. ಪರಮೇಶ್ವರನ್ ಈಗ ರದ್ದಾಗಿರುವ ಕೊಚ್ಚಿ ಟಸ್ಕರ್ಸ್ ಕೇರಳದ ಪರ ಆಡುವಾಗ 2011ರಲ್ಲಿ ಆರ್‌ಸಿಬಿ ವಿರುದ್ಧ ದುಬಾರಿ ಓವರ್ ಎಸೆದಿದ್ದರು. ಪಟೇಲ್ ಅವರು 2021ರಲ್ಲಿ ಸಿಎಸ್ಕೆ ವಿರುದ್ದ ಆರ್‌ಸಿಬಿ ಪರ ಆಡುವಾಗ 37ರನ್ ನೀಡಿದ್ದರು.
ಮುಂಬೈ ಇಂಡಿಯನ್ಸ್ ತಂಡದ ಡೇನಿಯಲ್ ಸ್ಯಾಮ್ಸ್ 2022ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಒಂದೇ ಓವರ್ನಲ್ಲಿ 35 ರನ್ ನೀಡಿದ್ದು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ಖಲೀಲ್ ಇದೀಗ ರವಿ ಬೋಪಾರ ಹಾಗೂ ಪರ್ವಿಂದರ್ ಅವಾನರೊಂದಿಗೆ 5ನೇ ಸ್ಥಾನ ಹಂಚಿಕೊಂಡಿದ್ದಾರೆ. ಈ ಇಬ್ಬರು ಪಂಜಾಬ್ ತಂಡದ ಪರ ಆಡುವಾಗ ಒಂದೇ ಓವರ್ನಲ್ಲಿ ತಲಾ 33 ರನ್ ಬಿಟ್ಟುಕೊಟ್ಟಿದ್ದರು. ಬೋಪಾರ 2010ರಲ್ಲಿ ಕೆಕೆಆರ್ ವಿರುದ್ಧ, ಅವಾನ ಅವರು 2014ರಲ್ಲಿ ಸಿಎಸ್ಕೆ ವಿರುದ್ದ ದುಬಾರಿ ಬೌಲರ್ ಎನಿಸಿಕೊಂಡಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಅನ್ರಿಚ್ ನೋಟ್ಜೆ 2024ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಒಂದೇ ಓವರ್ನಲ್ಲಿ 32 ರನ್ ಬಿಟ್ಟುಕೊಟ್ಟಿದ್ದರು.