ಕರ್ನಾಟಕ ಕ್ರೀಡಾಕೂಟ 2025-26 ಲಾಂಛನ ಬಿಡುಗಡೆ
Photo Credit : X \ @kheloindia
ಬೆಂಗಳೂರು, ಡಿ. 24: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜನವರಿ 16 ರಿಂದ 22ರವರೆಗೆ ತುಮಕೂರಿನಲ್ಲಿ ನಡೆಯಲಿರುವ ಕರ್ನಾಟಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಬುಧವಾರ ಹೇಳಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದ ಒಲಿಂಪಿಕ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕರ್ನಾಟಕ ಕ್ರೀಡಾಕೂಟ 2025-26’ರ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಂಠೀರವ ಸ್ಟೇಡಿಯಂ ಮಾದರಿಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗಿದೆ. ಇಲ್ಲಿ ಸಿಂತೆಟಿಕ್ ಟ್ರ್ಯಾಕ್ ಮತ್ತು ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಇದೆ. ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ನಡೆಸುವ ಸಾಮರ್ಥ್ಯವಿದೆ ಎಂದು ಹೇಳಿದರು.
ತುಮಕೂರಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ 27 ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ನಾಲ್ಕು ಕ್ರೀಡೆಗಳನ್ನು ಮಾತ್ರ ಬೆಂಗಳೂರಿನಲ್ಲಿ ನಡೆಸಲಾಗುವುದು. ಒಲಿಂಪಿಕ್ ಮಟ್ಟದ ಕ್ರೀಡಾಕೂಟ ಇದಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಉತ್ತಮ ಅವಕಾಶ ಸಿಗಲಿದೆ. ಕಳೆದ ವರ್ಷ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ತುಮಕೂರಿನಲ್ಲಿ ನಡೆಯುವ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.
‘‘ತುಮಕೂರು ಜಿಲ್ಲೆಯಲ್ಲಿ ಕೃಷ್ಣಮೃಗ ಜಿಂಕೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ನಡೆಯುವ ಕರ್ನಾಟಕ ಕ್ರೀಡಾಕೂಟಕ್ಕೆ ಕೃಷ್ಣಮೃಗ ಜಿಂಕೆಯನ್ನು ಲಾಂಛನಕ್ಕೆ ಬಳಸಲಾಗಿದೆ. ಇದು ಕ್ರೀಡಾಕೂಟದ ಮೊದಲ ಹೆಜ್ಜೆಯಾಗಿದ್ದು, ಯಶಸ್ವಿಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ’’ ಎಂದರು.
ಈ ಹಿಂದೆ ದಸರಾ ಕ್ರೀಡಾಕೂಟದಲ್ಲಿ ಎಲ್ಲ ಕ್ರೀಡೆಗಳನ್ನು ನಡೆಸಲಾಗುತಿತ್ತು. ಇದನ್ನು ಹೊರತುಪಡಿಸಿದರೆ ಕ್ರೀಡಾಪಟುಗಳಿಗೆ ಬೇರೆ ಅವಕಾಶಗಳು ಸಿಗುತ್ತಿರಲಿಲ್ಲ. ಗೋವಿಂದರಾಜ್ ಅವರು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾದ ಬಳಿಕ, ಕಳೆದ 25 ವರ್ಷಗಳಿಂದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
‘‘ಕಬಡ್ಡಿ, ಖೋಖೋ, ಹಾಕಿ ಸೇರಿದಂತೆ ವಿವಿಧ ಕ್ರೀಡಾ ಸಂಸ್ಥೆಗಳಿಗೆ ತಲಾ 50 ಲಕ್ಷ ರೂ. ಮೊತ್ತದ ಅನುದಾನ ನೀಡಲಾಗಿದೆ. ದೇಶದಲ್ಲಿ ಯಾವ ರಾಜ್ಯಗಳೂ ಈ ರೀತಿಯ ಕೆಲಸವನ್ನು ಮಾಡಿಲ್ಲ. ಕ್ರೀಡಾಪಟುಗಳಲ್ಲಿ ಕ್ರೀಡಾಸ್ಪೂರ್ತಿ ಬರಬೇಕಾದರೆ, ಕ್ರೀಡಾಕೂಟಗಳು ಹೆಚ್ಚಾಗಿ ನಡೆಯಬೇಕು ಮತ್ತು ಅದರಲ್ಲಿ ಕ್ರೀಡಾಪಟುಗಳು ಭಾಗವಹಿಸುತ್ತಿರಬೇಕು. ಇದರಿಂದ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಏನು ಎಂಬುದು ಗೊತ್ತಾಗುತ್ತದೆ. ಮುಂದಿನ ಕ್ರೀಡಾಕೂಟಗಳಿಗೆ ಹೆಚ್ಚಿನ ರೀತಿಯಲ್ಲಿ ಶ್ರಮವಹಿಸಲು ಸಾಧ್ಯವಾಗುತ್ತದೆ’’ ಎಂದರು.
ಗೋವಿಂದರಾಜ ಅವರು ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ತುಮಕೂರು ದಸರಾ ಯಶಸ್ವಿಯಾಗಿ ನಡೆಸಿದ್ದು, ಕರ್ನಾಟಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಗುವುದು. ಟೆನಿಸ್, ಬಾಸ್ಕೆಟ್ಬಾಲ್, ಕಬಡ್ಡಿ ಸೇರಿದಂತೆ ಎಲ್ಲಾ ಕ್ರೀಡೆಗಳನ್ನು ನಡೆಸಲು ಸುಸಜ್ಜಿತ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಕರ್ನಾಟಕ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಗೋವಿಂದರಾಜ್, ಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್., ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಭು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.