ಜೂಲನ್ ಗೋಸ್ವಾಮಿ ವಿಶ್ವ ಕಪ್ ದಾಖಲೆ ಮುರಿದ ಮರಿಝಾನ್ ಕಾಪ್
ಮರಿಝಾನ್ ಕಾಪ್ | Photo Credit : AP \ PTI
ಹೊಸದಿಲ್ಲಿ, ಅ.30: ಅಮೋಘ ಪ್ರದರ್ಶನ ನೀಡಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಮೊದಲ ಬಾರಿ ಐಸಿಸಿ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವಲ್ಲಿ ನೆರವಾಗಿರುವ ಆಲ್‌ರೌಂಡರ್ ಮರಿಝಾನ್ ಕಾಪ್ ಅವರು ಭಾರತದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಅವರ ವಿಶ್ವ ಕಪ್ ದಾಖಲೆಯೊಂದನ್ನು ಮುರಿದಿದ್ದಾರೆ.
ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ಬುಧವಾರ ನಡೆದ ಮಹಿಳೆಯರ ವಿಶ್ವಕಪ್‌ನ ಮೊದಲ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 4 ಬಾರಿಯ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 125 ರನ್‌ಗಳ ಅಂತರದಿಂದ ಮಣಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.
35ರ ಹರೆಯದ ಕಾಪ್ ಮೊತ್ತ ಮೊದಲ ಓವರ್‌ನಲ್ಲಿ ಇಂಗ್ಲೆಂಡ್‌ನ ಇಬ್ಬರು ಬ್ಯಾಟರ್‌ಗಳನ್ನು ಔಟ್ ಮಾಡಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಮೇಲುಗೈ ಒದಗಿಸಿದರು. ಅಂತಿಮವಾಗಿ 7 ಓವರ್‌ಗಳಲ್ಲಿ 20 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದಿದ್ದರು. ಗೆಲ್ಲಲು 319 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಕಾಪ್ ನೇತೃತ್ವದ ದಕ್ಷಿಣ ಆಫ್ರಿಕಾ ಬೌಲರ್‌ಗಳ ದಕ್ಷ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 194 ರನ್‌ಗೆ ಆಲೌಟಾಯಿತು.
ಹೀದರ್ ನೈಟ್, ನ್ಯಾಟ್ ಸಿವೆರ್-ಬ್ರಂಟ್ ಹಾಗೂ ಆ್ಯಮಿ ಜೋನ್ಸ್ ಸಹಿತ 5 ವಿಕೆಟ್‌ಗಳ ಗೊಂಚಲು ಪಡೆದಿರುವ ಮರಿಝಾನ್ ಕಾಪ್ ಅವರು ಭಾರತದ ಲೆಜೆಂಡ್ ಜೂಲನ್ ಗೋಸ್ವಾಮಿ ಅವರ ವಿಶ್ವ ಕಪ್ ದಾಖಲೆ ಮುರಿದರು. ಮಹಿಳೆಯರ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಗೋಸ್ವಾಮಿ(43 ವಿಕೆಟ್)ದಾಖಲೆಯನ್ನು ಕಾಪ್ ಮುರಿದರು.
ಆ್ಯನಿ ಶ್ರುಬ್ಸೋಲೆ ಹಾಗೂ ಸೋಫಿ ಎಕ್ಲೆಸ್ಟೋನ್ ನಂತರ ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ಐದು ವಿಕೆಟ್ ಗೊಂಚಲು ಪಡೆದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಕಾಪ್ ಅವರು ವಿಶ್ವ ಕಪ್ ಇತಿಹಾಸದಲ್ಲಿ ಒಂದೇ ಎದುರಾಳಿಯ ವಿರುದ್ಧ 2 ಬಾರಿ ಐದು ವಿಕೆಟ್ ಗೊಂಚಲು ಪಡೆದಿರುವ ಮೊದಲ ಆಟಗಾರ್ತಿಯಾಗಿದ್ದಾರೆ. 2022ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮೌಂಟ್ ಮೌಂಗ್‌ನುಯಿ ವಿರುದ್ಧ 45 ರನ್‌ಗೆ 5 ವಿಕೆಟ್‌ಗಳನ್ನು ಪಡೆದಿದ್ದರು.
ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳು:
44-ಮರಿಝಾನ್ ಕಾಪ್, ದಕ್ಷಿಣ ಆಫ್ರಿಕಾ(2009-25)
43-ಜೂಲನ್ ಗೋಸ್ವಾಮಿ, ಭಾರತ(2005-22)
39-ಲಿನ್ ಫುಲ್‌ಸ್ಟನ್, ಆಸ್ಟ್ರೇಲಿಯ(1982-88)
39-ಮೆಗಾನ್ ಶುಟ್, ಆಸ್ಟ್ರೇಲಿಯ(2013-25)
37-ಕರೋಲ್ ಹಾಡ್ಜ್, ಇಂಗ್ಲೆಂಡ್(1982-83)
37-ಸೋಫಿ ಎಕ್ಲೆಸ್ಟೋನ್, ಇಂಗ್ಲೆಂಡ್(2022-25)