ತಂದೆಯ ನಿಧನದ 4 ದಿನಗಳಲ್ಲೇ ಮೆಸ್ಸಿ ಮೈದಾನಕ್ಕೆ !

Update: 2026-08-13 08:44 IST

ಲಿಯೋನೆಲ್ ಮೆಸ್ಸಿ | Photo Credit : PTI

ಮಯಾಮಿ, ಫ್ಲೋರಿಡಾ : ತಂದೆ ಜಾರ್ಜ್ ಮೆಸ್ಸಿ ಅವರ ನಿಧನದ ಕೇವಲ ನಾಲ್ಕು ದಿನಗಳ ಬಳಿಕ ಲಿಯೋನೆಲ್ ಮೆಸ್ಸಿ ಫುಟ್ಬಾಲ್ ಗೆ ಮರಳಿದ್ದಾರೆ. ಆಗಸ್ಟ್ 12ರ ಬುಧವಾರ ಲಿಯಾನ್ ವಿರುದ್ಧದ ಇಂಟರ್ ಮಯಾಮಿ ತಂಡದ ನಿರ್ಣಾಯಕ ಲೀಗ್ಸ್ ಕಪ್ ಪಂದ್ಯದಲ್ಲಿ ಮೆಸ್ಸಿ ಭಾವುಕರಾಗಿ ಕಣಕ್ಕಿಳಿದರು.

ತಂದೆಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ತಮ್ಮ ಫುಟ್ಬಾಲ್ ವೃತ್ತಿಜೀವನವನ್ನು ಮುಂದುವರಿಸುವ ಬಗ್ಗೆ ಅನಿಶ್ಚಿತತೆ ವ್ಯಕ್ತಪಡಿಸಿದ್ದ ಮೆಸ್ಸಿ, ಈ ಪಂದ್ಯದಲ್ಲಿ ಆರಂಭಿಕ ತಂಡದಲ್ಲಿರಲಿಲ್ಲ. ಬದಲಿ ಆಟಗಾರರ ಪಟ್ಟಿಯಲ್ಲಿದ್ದ ಅವರು ದ್ವಿತೀಯಾರ್ಧದಲ್ಲಿ ಮೈದಾನಕ್ಕಿಳಿದರು.

ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತಮ್ಮ ಹುಟ್ಟೂರು ರೊಸಾರಿಯೊಗೆ ತೆರಳಿದ್ದ ಮೆಸ್ಸಿ, ಕೆಲವೇ ದಿನಗಳಲ್ಲಿ ಮತ್ತೆ ಮೈದಾನಕ್ಕೆ ಮರಳಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಮೆಸ್ಸಿ ಆಗಸ್ಟ್ 8ರಂದು ನಿಧನರಾಗಿದ್ದರು. ಮೆಸ್ಸಿಯ ಫುಟ್ಬಾಲ್ ವೃತ್ತಿಜೀವನ ರೂಪುಗೊಳ್ಳುವಲ್ಲಿ ಜಾರ್ಜ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಮೆಸ್ಸಿಯ ವೃತ್ತಿಜೀವನದ ಆರಂಭದಿಂದಲೇ ಅವರ ಮ್ಯಾನೇಜರ್ ಹಾಗೂ ಆಪ್ತ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

ಭಾವುಕ ಪೋಸ್ಟ್ ಮಾಡಿದ್ದ ಮೆಸ್ಸಿ ತಂದೆಯ ನಿಧನದ ಬಳಿಕ ಮೆಸ್ಸಿ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದರು.

“ನಿಮ್ಮಿಲ್ಲದೆ ನಾನು ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಮುಂದೆ ಹೇಗೆ ಸಾಗಬೇಕೆಂದೂ ಗೊತ್ತಾಗುತ್ತಿಲ್ಲ. ನಾನು ಕೇವಲ ಫುಟ್ಬಾಲ್ ಆಡಿದ್ದೆ. ಈಗ ಅದನ್ನು ಇನ್ನೂ ಎಷ್ಟು ಕಾಲ ಮುಂದುವರಿಸುತ್ತೇನೆ ಎಂಬುದರ ಬಗ್ಗೆ ನನಗೇ ಸಾಕಷ್ಟು ಅನುಮಾನಗಳಿವೆ” ಎಂದು ಮೆಸ್ಸಿ ಬರೆದುಕೊಂಡಿದ್ದರು.

ತಮ್ಮ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿದ್ದ ತಂದೆ ಜಾರ್ಜ್ ಅವರೊಂದಿಗಿನ ವಿಶೇಷ ಬಾಂಧವ್ಯವನ್ನು ಮೆಸ್ಸಿ ಸ್ಮರಿಸಿದ್ದರು.

“ನೀವು ನನ್ನ ತಂದೆ, ನನ್ನ ಸ್ನೇಹಿತ ಮತ್ತು ನನ್ನ ಪ್ರತಿನಿಧಿಯಾಗಿದ್ದಿರಿ” ಎಂದು ಹೇಳಿದ್ದ ಮೆಸ್ಸಿ, ತಮ್ಮನ್ನು ತರಬೇತಿ ಶಿಬಿರಗಳಿಗೆ ಕರೆದೊಯ್ಯುತ್ತಿದ್ದ ತಂದೆ, ತಮ್ಮ ಯಾವುದೇ ಪಂದ್ಯವನ್ನು ತಪ್ಪಿಸಿಕೊಳ್ಳದೆ ಹಾಜರಾಗುತ್ತಿದ್ದುದನ್ನು ನೆನಪಿಸಿಕೊಂಡಿದ್ದರು.

ಮೆಸ್ಸಿಯ ವೃತ್ತಿಜೀವನದ ಮೇಲೆ ಜಾರ್ಜ್ ಅವರ ಪ್ರಭಾವ ಕೇವಲ ತಂದೆಯ ಪಾತ್ರಕ್ಕೆ ಸೀಮಿತವಾಗಿರಲಿಲ್ಲ. ಬಾಲ್ಯದಿಂದಲೇ ಮಗನ ವೃತ್ತಿಜೀವನ ಮತ್ತು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಅವರು, ರೊಸಾರಿಯೊದ ಬಾಲಕನೊಬ್ಬ ವಿಶ್ವ ಫುಟ್ಬಾಲ್ ನ ಶ್ರೇಷ್ಠ ಆಟಗಾರನಾಗಿ ಬೆಳೆಯುವವರೆಗೂ ಮೆಸ್ಸಿಯ ಅತ್ಯಂತ ಆಪ್ತ ಸಲಹೆಗಾರರಾಗಿ ಜೊತೆಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News