×
Ad

ಮಯಾಮಿ ಓಪನ್: ಅಲ್ಕರಾಝ್, ಸಿನ್ನರ್, ಸ್ವಿಯಾಟೆಕ್ ಮೂರನೇ ಸುತ್ತಿಗೆ

Update: 2024-03-24 21:37 IST

Photo: NDTV 

ಮಯಾಮಿ: ಇಂಡಿಯನ್ ವೆಲ್ಸ್ ಚಾಂಪಿಯನ್, ಎರಡನೇ ವಿಶ್ವ ರ‍್ಯಾಂಕಿಂಗ್ ನ ಸ್ಪೇನ್ ನ ಕಾರ್ಲೋಸ್ ಅಲ್ಕರಾಝ್ ಶನಿವಾರ ರಾತ್ರಿ ತನ್ನದೇ ದೇಶದ ರಾಬರ್ಟೊ ಕಾರ್ಬಾಲ್ಸ್ ಬೀನರನ್ನು ಸೋಲಿಸುವುದರೊಂದಿಗೆ ತನ್ನ ಮಯಾಮಿ ಓಪನ್ ಅಭಿಯಾನವನ್ನು ಆರಂಭಿಸಿದ್ದಾರೆ. ಅವರು ಪುರುಷರ ಸಿಂಗಲ್ಸ್ ನಲ್ಲಿ ತನ್ನ ಎದುರಾಳಿಯನ್ನು 6-2, 6-1 ನೇರ ಸೆಟ್ ಗಳಿಂದ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು.

ಹಾಲಿ ವಿಂಬಲ್ಡನ್ ಚಾಂಪಿಯನ್ ಕೂಡ ಆಗಿರುವ 20 ವರ್ಷದ ಅಲ್ಕರಾಝ್ ಆರಂಭದಿಂದ ಕೊನೆಯವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅವರು ತನ್ನ ವೇಗ ಮತ್ತು ಕ್ಷಿಪ್ರ ಚಲನೆಗಳ ಮೂಲಕ ಎದುರಾಳಿಯನ್ನು ಹಿಮ್ಮೆಟ್ಟಿಸಿದರು. ಅವರು ತಾನೆದುರಿಸಿದ ಎಲ್ಲಾ ಮೂರು ಬ್ರೇಕ್ ಪಾಯಿಂಟ್ ಗಳನ್ನು ಉಳಿಸಿಕೊಂಡರು ಹಾಗೂ ಅಂತಿಮವಾಗಿ ತನ್ನ ಸತತ ಏಳನೇ ವಿಜಯವನ್ನು ದಾಖಲಿಸಿದರು.

ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಹಾಗೂ ಮೂರನೇ ವಿಶ್ವ ರ‍್ಯಾಂಕಿಂಗ್ ನ ಇಟಲಿಯ ಜನಿಕ್ ಸಿನ್ನರ್ ತನ್ನದೇ ದೇಶದ ಆ್ಯಂಡ್ರಿ ವವಸೋರಿಯನ್ನು 6-3, 6-4 ಸೆಟ್ ಗಳಿಂದ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು.

ಹಾಲಿ ಚಾಂಪಿಯನ್ ರಶ್ಯದ ಡನೀಲ್ ಮೆಡ್ವೆಡೆವ್ ಹಂಗೇರಿಯ ಮಾರ್ಟೊನ್ ಫಕ್ಸೊವಿಕ್ಸ್ ರನ್ನು 6-4, 6-2 ಸೆಟ್ತಗಳಿಂದ ಮಣಿಸಿ ಮೂರನೇ ಸುತ್ತು ತಲುಪಿದರು.

ಮಯಾಮಿಯಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಬ್ರಿಟನ್ ನ ಆ್ಯಂಡಿ ಮರೆ ಶನಿವಾರ ಅರ್ಜೆಂಟೀನದ ಥಾಮಸ್ ಮಾರ್ಟಿನ್ ಎಚೆವೆರಿಯನ್ನು 7-6(7/0), 6-3 ಸೆಟ್ ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು.

ಇದು ಕಳೆದ ವರ್ಷದ ಆಗಸ್ಟ್ ತಿಂಗಳ ಬಳಿಕ, ಅಗ್ರ 50ರ ರ‍್ಯಾಂಕಿಂಗ್ ಆಟಗಾರನೊಬ್ಬನ ವಿರುದ್ಧ ಮರೆ ಗಳಿಸಿರುವ ಮೊದಲ ವಿಜಯವಾಗಿದೆ. ಈ ವರ್ಷದ ಕೊನೆಯಲ್ಲಿ ನಿವೃತ್ತಿಯಾಗುವ ಇಂಗಿತವನ್ನೂ ಮರೆ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ನಲ್ಲಿ, ಪೋಲ್ಯಾಂಡ್ ನ  ಇಗಾ ಸ್ವಿಯಾಟೆಕ್ ಇಟಲಿಯ ಕಾಮಿಲಾ ಜಿಯಾರ್ಜಿಯನ್ನು 6-1, 6-1 ನೇರ ಸೆಟ್ ಗಳಿಂದ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು. ಸ್ವಿಯಾಟೆಕ್ ಕೇವಲ 67 ನಿಮಿಷಗಳಲ್ಲಿ ಗೆಲುವನ್ನು ಖಾತರಿಪಡಿಸಿದರು.

ಜಪಾನ್ ನವೋಮಿ ಒಸಾಕ 17ನೇ ರ‍್ಯಾಂಕಿಂಗ್ ನ ಉಕ್ರೇನ್ ನ ಎಲೀನಾ ಸ್ವಿಟೋನ್ಲಿನಾರನ್ನು 6-2, 7-6 (7/5) ಸೆಟ್ ಗಳಿಂದ ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು. ಇಬ್ಬರೂ ಮಹಿಳೆಯರು ಹೆರಿಗೆಯ ಬಳಿಕ ಸ್ಪರ್ಧಾತ್ಮಕ ಟೆನಿಸ್ಗೆ ಮರಳಿದ್ದಾರೆ.

ಟುನೀಶಿಯದ ಆರನೇ ಶ್ರೇಯಾಂಕದ ಉನಸ್ ಜಾಬೀರ್ ರಶ್ಯದ 21 ವರ್ಷದ ಎಲೀನಾ ಅವನೇಸ್ಯನ್ ವಿರುದ್ಧ 1-6, 6-4, 3-6 ಸೆಟ್ಗಳಿಂದ ಪರಾಭವಗೊಂಡರು.

ಮಾಜಿ ಸಂಗಾತಿಯ ಸಾವಿನ ದುಃಖದ ನಡುವೆಯೂ ಗೆದ್ದ ಸಬಲೆಂಕ

ಮಯಾಮಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ, ತನ್ನ ಮಾಜಿ ಸಂಗಾತಿಯ ಸಾವಿನ ದುಃಖದ ನಡುವೆಯೇ, ಎರಡನೇ ವಿಶ್ವ ರ‍್ಯಾಂಕಿಂಗ್ ನ ಬೆಲಾರುಸ್ ನ ಅರೈನಾ ಸಬಲೆಂಕ ಸ್ಪೇನ್ ನ ಪೌಲಾ ಬಡೋಸರನ್ನು 6-4, 6-3 ಸೆಟ್ ಗಳಿಂದ ಸೋಲಿಸಿದ್ದಾರೆ.

ಅವರ ಮಾಜಿ ಸಂಗಾತಿ ಕೋನ್ಸ್ಟಾಂಟಿನ್ ಕೊಲ್ಸೊವ್ ಈ ವಾರದ ಆದಿ ಭಾಗದಲ್ಲಿ ಮಯಾಮಿಯಲ್ಲಿ ರೆಸಾರ್ಟ್ ಕಟ್ಟಡವೊಂದರ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. 42 ವರ್ಷದ ಕೊಲ್ಸೊವ್ ಎನ್ಎಚ್ಎಲ್ ಐಸ್ ಹಾಕಿ ಆಟಗಾರನಾಗಿದ್ದರು.

ಈ ಘಟನೆಯ ಬಳಿಕ, ಸಬಲೆಂಕ ಮೈದಾನಕ್ಕೆ ಆಡಲು ಬಂದಿರುವುದು ಇದೇ ಮೊದಲ ಬಾರಿಯಾಗಿದೆ.

ಮಳೆಯಿಂದಾಗಿ ಆರು ಗಂಟೆಗಳ ವಿಳಂಬದ ಬಳಿಕ, ಸಂಪೂರ್ಣ ಕಪ್ಪು ದಿರಿಸು ಧರಿಸಿ ಮೈದಾನಕ್ಕೆ ಬಂದ ಸಬಲೆಂಕ ತನ್ನ ಭಾವನೆಗಳನ್ನು ಅದುಮಿಟ್ಟುಕೊಂಡು ಆಡಿದರು. ಅವರ ಎದುರಾಳಿ ಹಾಗೂ ಆತ್ಮೀಯ ಗೆಳತಿ ಬಡೋಸ ಕೂಡ ಸಂಪೂರ್ಣ ಕಪ್ಪು ದಿರಿಸು ಧರಿಸಿ ಆಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News