×
Ad

ʼಫೆಲೆಸ್ತೀನಿನ ಪೀಲೆ' ಮೃತಪಟ್ಟಿದ್ದೇಕೆ ಎಂದು ಹೇಳುವಿರಾ?: UEFA ಅನ್ನು ಪ್ರಶ್ನಿಸಿದ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್

ಇಸ್ರೇಲ್‌ ದಾಳಿಯಲ್ಲಿ ಮೃತಪಟ್ಟ ಸುಲೇಮಾನ್ ಅಲ್ ಉಬೈದ್ ಗೆ ಗೌರವ ಸೂಚಿಸಿದ್ದ UEFA

Update: 2025-08-10 13:05 IST

ಮುಹಮ್ಮದ್ ಸಲಾಹ್ / ಸುಲೇಮಾನ್ ಅಲ್ ಉಬೈದ್ (Photo: X/@MoSalah,@UEFA)

ಗಾಝಾ: ಫೆಲೆಸ್ತೀನ್‌ನ ರಾಷ್ಟ್ರೀಯ ಫುಟ್ಬಾಲ್ ತಂಡದ ತಾರೆ ಸುಲೇಮಾನ್ ಅಲ್ ಉಬೈದ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಗೌರವ ಸಲ್ಲಿಸಿದ್ದರೂ, ಅವರ ಸಾವಿನ ಕುರಿತು ವಿವರ ನೀಡದಿದ್ದಕ್ಕೆ ಯೂರೋಪಿಯನ್ ಫುಟ್‌ಬಾಲ್ ನಿಯಂತ್ರಣ ಸಂಸ್ಥೆ (UEFA)ಯನ್ನು ಲಿವರ್‌ ಪೂಲ್‌ ತಂಡದ ತಾರೆ ಮುಹಮ್ಮದ್ ಸಲಾಹ್ ಅವರು ಟೀಕಿಸಿದ್ದಾರೆ.

41 ವರ್ಷದ ʼಫೆಲೆಸ್ತೀನಿನ ಪೀಲೆʼ ಎಂದು ಹೆಸರಾಗಿದ್ದ ಅಲ್ ಉಬೈದ್, ದಕ್ಷಿಣ ಗಾಝಾ ಪಟ್ಟಿಯಲ್ಲಿ ಮಾನವೀಯ ನೆರವಿಗಾಗಿ ಕಾಯುತ್ತಿದ್ದಾಗ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ನ ಫುಟ್‌ಬಾಲ್ ಅಸೋಸಿಯೇಷನ್ ಬುಧವಾರ ಪ್ರಕಟಿಸಿದೆ.

ಶುಕ್ರವಾರ X ಖಾತೆಯಲ್ಲಿನ ಪೋಸ್ಟ್ ನಲ್ಲಿ UEFAವು, ಅಲ್ ಉಬೈದ್‌ ರನ್ನು ಕತ್ತಲೆಯ ಸಮಯದಲ್ಲೂ ಮಕ್ಕಳಿಗೆ ಭರವಸೆ ನೀಡಿದ ಪ್ರತಿಭೆ ಎಂದು ಶ್ಲಾಘಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಈಜಿಪ್ಟ್ ಮೂಲದ ಆಟಗಾರ ಮುಹಮ್ಮದ್ ಸಲಾಹ್, "ಅವರು ಹೇಗೆ, ಎಲ್ಲಿ ಮತ್ತು ಏಕೆ ಸಾವನ್ನಪ್ಪಿದರು ಎಂದು ನೀವು ಹೇಳಬಹುದೇ?" ಎಂದು ಪ್ರಶ್ನಿಸಿದ್ದಾರೆ. UEFA, ಸಲಾಹ್ ಅವರ ಪ್ರಶ್ನಿಸಲು ನಿರಾಕರಿಸಿದೆ.

ಪ್ರೀಮಿಯರ್ ಲೀಗ್‌ ನ ಅಗ್ರ ತಾರೆಗಳಲ್ಲಿ ಒಬ್ಬರಾದ ಸಲಾಹ್, ಜಗತ್ತಿನ ಪ್ರಮುಖ ಅರಬ್ ಕ್ರೀಡಾಪಟುಗಳಲ್ಲೊಬ್ಬರು. ಎರಡು ವರ್ಷಗಳ ಹಿಂದೆ ಗಾಝಾಗೆ ಮಾನವೀಯ ನೆರವು ನೀಡುವಂತೆ ಅವರು ಸಾರ್ವಜನಿಕವಾಗಿ ಕೋರಿದ್ದರು.

ಮೇ ತಿಂಗಳ ಅಂತ್ಯದಿಂದ, ಅಮೆರಿಕ ಹಾಗೂ ಇಸ್ರೇಲ್ ಬೆಂಬಲಿತ ಗಾಝಾ ಹ್ಯುಮಾನಿಟೇರಿಯನ್ ಫೌಂಡೇಶನ್ ಮೂಲಕ ನೆರವು ವಿತರಣೆ ಪ್ರಾರಂಭವಾದ ಬಳಿಕ, ನೆರವು ವಿತರಣಾ ಕೇಂದ್ರಗಳು ಹಾಗೂ ಬೆಂಗಾವಲುಗಳ ಬಳಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.

ಅಲ್ ಉಬೈದ್ ಗಾಝಾ ನಗರದಲ್ಲಿ ಜನಿಸಿದ್ದು, ಗಾಝಾ ಮತ್ತು ವೆಸ್ಟ್ ಬ್ಯಾಂಕ್‌ನ ಹಲವಾರು ಕ್ಲಬ್‌ಗಳಿಗೆ ಆಡಿದ್ದಾರೆ. ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಉಬೈದ್ ಅಗಲಿದ್ದಾರೆ

ಎಂದು ಫೆಲೆಸ್ತೀನ್ ಫುಟ್‌ಬಾಲ್ ಅಸೋಸಿಯೇಷನ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News