ಮುಹಮ್ಮದ್ ಸಿರಾಜ್ ರ ವೇಗದ ಥ್ರೋ ಕೈಚೆಲ್ಲಿದ ಪಂತ್; ಕೆ.ಎಲ್.ರಾಹುಲ್ ಪ್ರತಿಕ್ರಿಯೆ ಹೀಗಿತ್ತು…
ಕೆ.ಎಲ್.ರಾಹುಲ್ , ಮುಹಮ್ಮದ್ ಸಿರಾಜ್ |Screengrab/Jio Hotstar
ಗುವಾಹಟಿ: ಇಲ್ಲಿನ ಬರ್ಸಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ನ ಮೂರನೆಯ ದಿನದಾಟದಲ್ಲಿ ಭಾರತದ ಬ್ಯಾಟರ್ ಗಳ ದಯನೀಯ ವೈಫಲ್ಯ ಮತ್ತೊಮ್ಮೆ ಮುಂದುವರಿಯಿತು. ಗಾಯಕ್ಕೆ ಉಪ್ಪು ಸವರಿದಂತೆ, ಭಾರತದ ಬೌಲರ್ ಗಳನ್ನು ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಗಳಾದ ಏಡನ್ ಮರ್ಕ್ರಮ್ ಹಾಗೂ ರಯಾನ್ ರಿಕೆಲ್ಟನ್ ಮತ್ತೊಮ್ಮೆ ಕಾಡಿದರು. ಇದು ಸಹಜವಾಗಿಯೇ ಆತಿಥೇಯ ತಂಡದ ಆಟಗಾರರಲ್ಲಿ ಮತ್ತಷ್ಟು ಹತಾಶ ಭಾವನೆ ಮೂಡಿಸಿತು.
ಈ ಹತಾಶ ಭಾವನೆ ಸ್ಪಷ್ಟವಾಗಿ ಕಂಡು ಬಂದಿದ್ದು ಭಾರತ ತಂಡದ ವೇಗಿ ಮುಹಮ್ಮದ್ ಸಿರಾಜ್ ರಲ್ಲಿ. ದಿನದಾಟದ ಅಂತಿಮ ಓವರ್ ಬೌಲ್ ಮಾಡುವ ಹೊಣೆಯನ್ನು ನಾಯಕ ರಿಷಭ್ ಪಂತ್, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಗೆ ವಹಿಸಿದರು. ಕುಲದೀಪ್ ಯಾದವ್ ಎಸೆದ ಬಾಲ್ ಅನ್ನು ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ ರಯಾನ್ ರಿಕಲ್ಟನ್ ಲಾಂಗ್ ಆಫ್ ನತ್ತ ಬಾರಿಸಿದರು. ಆ ಬಾಲನ್ನು ಹಿಡಿದ ಮುಹಮ್ಮದ್ ಸಿರಾಜ್, ಅದನ್ನು ವಿಕೆಟ್ ಕೀಪರ್ ರಿಷಭ್ ಪಂತ್ ರತ್ತ ವೇಗವಾಗಿ ಎಸೆದರು. ಹಾಗೆ ವೇಗವಾಗಿ ಎಸೆದ ಬಾಲ್ ಅನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ರಿಷಭ್ ಪಂತ್ ವಿಫಲರಾದರು. ಆಗ ಬ್ಯಾಕಪ್ ನಲ್ಲಿದ್ದ ಕೆ.ಎಲ್.ರಾಹುಲ್ ಆ ಬಾಲ್ ಅನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಆದರೆ, ಮುಹಮ್ಮದ್ ಸಿರಾಜ್ ಎಸೆದ ಬಾಲ್ ನಿಂದ ಅತೃಪ್ತರಾದಂತೆ ಕಂಡು ಬಂದ ಕೆ.ಎಲ್.ರಾಹುಲ್, ಅವರತ್ತ ನೋಡುತ್ತಾ “ಸಮಾಧಾನ” ಎಂದು ಹೇಳಿದ್ದು ಕಂಡು ಬಂದಿತು. ನಂತರ, ಇಬ್ಬರೂ ಪರಸ್ಪರ ತೆಳು ನಗೆಯನ್ನು ವಿನಿಮಯ ಮಾಡಿಕೊಂಡು ಹಗುರಾದರು.
ಪ್ರಥಮ ಟೆಸ್ಟ್ ನಂತೆಯೇ ದ್ವಿತೀಯ ಟೆಸ್ಟ್ ನಲ್ಲೂ ಭಾರತೀಯ ಬ್ಯಾಟರ್ ಗಳು ದಯನೀಯವಾಗಿ ವಿಫಲಗೊಂಡರು. ಇದರೊಂದಿಗೆ ಬೌಲಿಂಗ್ ಪಡೆಯೂ ವಿಫಲಗೊಂಡಿದ್ದರಿಂದ, ಭಾರತ ತಂಡದ ಹತಾಶೆ ಮುಗಿಲು ಮುಟ್ಟಿತು. ದಕ್ಷಿಣ ಆಫ್ರಿಕಾ ತಂಡ ಪ್ರಥಮ ಇನಿಂಗ್ಸ್ ನಲ್ಲಿ ಪೇರಿಸಿದ 489 ರನ್ ಗಳಿಗೆ ಪ್ರತಿಯಾಗಿ, ಭಾರತ ತಂಡ ಕೇವಲ 201 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಆದರೆ, ಭಾರತ ತಂಡಕ್ಕೆ ಫಾಲೋ ಆನ್ ಹೇರದ ದಕ್ಷಿಣ ಆಫ್ರಿಕಾ ತಂಡ ದಿನದಾಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ. ದ್ವಿತೀಯ ಟೆಸ್ಟ್ ನಲ್ಲೂ ಕೂಡಾ ದಕ್ಷಿಣ ಆಫ್ರಿಕಾ ತಂಡ ಮೇಲುಗೈ ಸಾಧಿಸುವ ಎಲ್ಲ ಲಕ್ಷಣಗಳೂ ಪಂದ್ಯದ ಮೂರನೆಯ ದಿನದಂದು ವ್ಯಕ್ತವಾಗಿದೆ. ಇದು ಸಹಜವಾಗಿಯೇ ಭಾರತ ತಂಡದ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.