ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲು ಮುಸ್ತಫಿಝುರ್ರಹ್ಮಾನ್‌ಗೆ ಎನ್‌ಒಸಿ ನೀಡಿದ ಬಿಸಿಬಿ
ಮುಸ್ತಫಿಝುರ್ರಹ್ಮಾನ್ | PC : IPL
ಹೊಸದಿಲ್ಲಿ : ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಮೇ 18ರಿಂದ 24ರ ತನಕ ಐಪಿಎಲ್ ಪಂದ್ಯವನ್ನಾಡಲು ಮುಸ್ತಫಿಝುರ‌್ರಹ್ಮಾನ್‌ಗೆ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ)ನೀಡಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಶುಕ್ರವಾರ ಮಧ್ಯಾಹ್ನ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಮೂಲಕ ಮಿಚೆಲ್ ಸ್ಟಾರ್ಕ್ ಅನುಪಸ್ಥಿತಿಯಲ್ಲಿ ಮುಸ್ತಫಿಝುರ‌್ರಹ್ಮಾನ್ ಡೆಲ್ಲಿ ತಂಡದ ಪರ ಲೀಗ್ ಪಂದ್ಯವನ್ನು ಆಡಲು ಮಾತ್ರ ಲಭ್ಯವಿರಲಿದ್ದಾರೆ. ಪ್ಲೇ ಆಫ್ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ. ಡೆಲ್ಲ್ ತಂಡವು 2025ರ ಐಪಿಎಲ್‌ನ ಲೀಗ್ ಹಂತದಲ್ಲಿ ಇನ್ನು 3 ಪಂದ್ಯಗಳನ್ನು ಆಡಲು ಬಾಕಿ ಇದೆ.
ಭಾರತಕ್ಕೆ ಶನಿವಾರ ಪ್ರಯಾಣಿಸುವ ಮೊದಲು ಶಾರ್ಜಾದಲ್ಲಿ ಯುಎಇ ವಿರುದ್ಧ ನಡೆಯಲಿರುವ ಮೊದಲ ಟಿ-20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡದಲ್ಲಿ ರಹ್ಮಾನ್ ಲಭ್ಯ ಇರುತ್ತಾರೆ ಎಂದು ಬಿಸಿಬಿ ಖಚಿತಪಡಿಸಿದೆ.
ಮೇ 18ರಂದು ಭಾರತಕ್ಕೆ ತಲುಪಲಿರುವ ಮುಸ್ತಫಿಝುರ‌್ರಹ್ಮಾನ್ ಅದೇ ದಿನ ಸಂಜೆ ನಡೆಯುವ ಡೆಲ್ಲಿ ಪಂದ್ಯದಲ್ಲಿ ಲಭ್ಯ ಇರುತ್ತಾರೋ, ಇಲ್ಲವೋ ಎಂದು ಇನ್ನೂ ಖಚಿತವಾಗಿಲ್ಲ.
2025ರ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ಆಡಲು ತಾನು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಶುಕ್ರವಾರ ಬೆಳಗ್ಗೆ ಸ್ಟಾರ್ಕ್ ಅವರು ದೃಢಪಡಿಸಿದ್ದರು. ಎಫ್ ಡು ಪ್ಲೆಸಿಸ್ ಹಾಗೂ ಟ್ರ್ಸಿಸ್ಟನ್ ಸ್ಟಬ್ಸ್ ಐಪಿಎಲ್‌ಗೆ ಮರಳುವುದನ್ನು ಖಚಿತಪಡಿಸಿದ್ದಾರೆ. ಆದರೆ ಸ್ಟಬ್ಸ್ ಅವರು ಲೀಗ್ ಹಂತದ ಪಂದ್ಯಕ್ಕೆ ಮಾತ್ರ ಲಭ್ಯವಿರಲಿದ್ದಾರೆ. ಆನಂತರ ಅವರು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡಲು ವಾಪಸಾಗಲಿದ್ದಾರೆ.