×
Ad

ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2025 | ಸೌದಿ ಅರೇಬಿಯಾದ ನಯೀಫ್ ಅಲ್ಮಾಸ್ರಾಹಿ ಅವರಿಂದ ವಿಶ್ವ ದಾಖಲೆ

Update: 2025-09-30 20:36 IST

PC | https://x.com/RanaG1025

ಹೊಸದಿಲ್ಲಿ, ಸೆ. 30: ಹೊಸದಿಲ್ಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯಮ್‌ಶಿಪ್‌ 2025ರಲ್ಲಿ ಮಂಗಳವಾರ ಸೌದಿ ಅರೇಬಿಯದ ನಯೀಫ್ ಅಲ್ಮಾಸ್ರಾಹಿ ಪುರುಷರ 100 ಮೀಟರ್ ಟಿ44 ಫೈನಲ್‌ನಲ್ಲಿ 10.94 ಸೆಕೆಂಡ್‌ಗಳೊಂದಿಗೆ ಹೊಸ ವಿಶ್ವ ದಾಖಲೆಯೊಂದನ್ನು ಬರೆದರು. ಅದೇ ವೇಳೆ, ಭಾರತದ ಎಫ್56 ಡಿಸ್ಕಸ್ ತ್ರೋ ಆಟಗಾರ ಯೋಗೇಶ್ ಕತುನಿಯಾ ಬೆಳ್ಳಿ ಪದಕ ಗೆದ್ದರು. ಪುರುಷರ 200 ಮೀಟರ್ ಟಿ35 ಸ್ಪರ್ಧೆಯಲ್ಲಿ ತಟಸ್ಥ ಪ್ಯಾರಾ ಅತ್ಲೀಟ್ ಡೇವಿಡ್ ಝಾಟಿಯೇವ್, ಪುರುಷರ 400 ಮೀಟರ್ ಟಿ20 ವಿಭಾಗದಲ್ಲಿ ಸ್ಪೇನ್‌ನ ಡೇವಿಡ್ ಜೋಸ್ ಪಿನೆಡಾ ಮೆಜಿಯಾ ಮತ್ತು ಪುರುಷರ 400 ಮೀಟರ್ ಟಿ54 ವಿಭಾಗದಲ್ಲಿ ತುನೀಶಿಯಾದ ಯಾಸಿನ್ ಘರ್ಬಿ ಮೂರು ಚಾಂಪಿಯನ್‌ಶಿಪ್‌ ದಾಖಲೆಗಳನ್ನು ನಿರ್ಮಿಸಿದರು.

ಯೋಗೇಶ್ ಕತುನಿಯಾ ಜಾಗತಿಕ ಮಟ್ಟದಲ್ಲಿ ತನ್ನ ಮೊದಲ ಚಿನ್ನದ ಪದಕಕ್ಕಾಗಿ ಗುರಿಯಿಟ್ಟಿದ್ದರು. ಆದರೆ ಬ್ರೆಜಿಲ್‌ನ ಆಟಗಾರ ಕ್ಲೌಡಿನಿ ಬಟಿಸ್ಟಾ ಅವರ ಆರು ಎಸೆತಗಳು ಯೋಗೇಶ್ರ ಅತ್ಯತ್ತಮ 42.49 ಮೀಟರ್ ಸಾಧನೆಯನ್ನು ಹಿಂದಿಕ್ಕಿದವು. ಅವರು ಚಿನ್ನ ಗೆದ್ದರೆ, 28 ವರ್ಷದ ಯೋಗೇಶ್ ಬೆಳ್ಳಿ ಗೆದ್ದರು. ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ಸತತ ಮೂರನೇ ಬೆಳ್ಳಿ ಪದಕವಾಗಿದೆ. ಜೊತೆಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಅವರು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.

ಪುರುಷರ 400 ಮೀಟರ್ ಟಿ54 ಫೈನಲ್‌ನಲ್ಲಿ ಟುನೀಶಿಯಾದ ಯಾಸಿನ್ ಘರ್ಬಿ, ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಡೈ ಯುಂಗ್ಕಿಯಾಂಗ್ (ಚೀನಾ) ಮತ್ತು ಬೆಳ್ಳಿ ಪದಕ ವಿಜೇತ ಅಥಿವಾಟ್ ಪೇಂಗ್-ನುಯಾ (ಥೈಲ್ಯಾಂಡ್) ರನ್ನು ಹಿಂದಿಕ್ಕಿ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಪುರುಷರ 200 ಮೀಟರ್ ಟಿ35 ಫೈನಲ್‌ನಲ್ಲಿ ಡೇವಿಡ್ ಝಾಟಿಯೇವ್ ಸತತ ಎರಡನೇ ವಿಶ್ವ ಚಾಂಪಿಯನ್‌ಶಿಪ್‌ ಚಿನ್ನದ ಪದಕ ಗೆದ್ದರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಇಹೊರ್ ಟ್ಸ್ವಿಟೊವ್ (ಉಕ್ರೇನ್) ಮತ್ತು ವಿಶ್ವ ದಾಖಲೆಗಾರ ಡಿಮಿಟ್ರಿ ಸಫ್ರೊನೊವ್ (ತಟಸ್ಥ ಪ್ಯಾರಾಲಿಂಪಿಕ್ ಆಟಗಾರ) ಅವರನ್ನು ಸೋಲಿಸಿ 23.01 ಸೆಕೆಂಡ್‌ಗಳಲ್ಲಿ ಚಿನ್ನದ ಪದಕ ಗೆದ್ದರು.

ಪದಕ ಪಟ್ಟಿಯಲ್ಲಿ ಬ್ರೆಝಿಲ್ ಮತ್ತು ಚೀನಾದ ನಡುವಿನ ಸ್ಪರ್ಧೆ ಮುಂದುವರಿದಿದೆ. ಬ್ರೆಝಿಲ್ ಈಗ ಐದು ಚಿನ್ನ, 10 ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಮೊದಲ ಸ್ಥಾನ ಪಡೆದರೆ, ಚೀನಾ ನಾಲ್ಕು ಚಿನ್ನ, ಏಳು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕದೊಂದಿಗೆ ಭಾರತವು ಏಳನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News