97ನೇ ವರ್ಷಕ್ಕೆ ಕಾಲಿಟ್ಟ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ನೀಲ್ ಹಾರ್ವೆ
ನೀಲ್ ಹಾರ್ವೆ |Photo Credit : @Aryaseen5911
ಮೆಲ್ಬರ್ನ್,ಅ.8: ಬದುಕಿರುವ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ, ಆಸ್ಟ್ರೇಲಿಯದ ಮಾಜಿ ಬ್ಯಾಟರ್ ನೀಲ್ ಹಾರ್ವೆ ಬುಧವಾರ 97ನೇ ವಸಂತಕ್ಕೆ ಕಾಲಿಟ್ಟರು.
ಆಸ್ಟ್ರೇಲಿಯದ ಪರ ದೀರ್ಘಕಾಲ ಬದುಕಿರುವ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹಾರ್ವೆ 1948ರಲ್ಲಿ ಇಂಗ್ಲೆಂಡ್ ನಲ್ಲಿ 34 ಪಂದ್ಯಗಳನ್ನು ಜಯಿಸಿ ಅಜೇಯವಾಗುಳಿದಿದ್ದ ಡಾನ್ ಬ್ರಾಡ್ಮನ್ ಅವರಿದ್ದ ಪ್ರವಾಸಿ ಆಸ್ಟ್ರೇಲಿಯ ತಂಡದ ಕೊನೆಯ ಜೀವಂತ ಸದಸ್ಯರೂ ಆಗಿದ್ದಾರೆ.
ವಿಕ್ಟೋರಿಯಾದಲ್ಲಿ ಜನಿಸಿರುವ ಎಡಗೈ ಬ್ಯಾಟರ್ ಹಾರ್ವೆ 1948 ಹಾಗೂ 1963ರ ನಡುವೆ 79 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 48.41ರ ಸರಾಸರಿಯಲ್ಲಿ 6,149 ರನ್ ಗಳಿಸಿದ್ದಾರೆ. 306 ಪ್ರಥಮ ದರ್ಜೆ ಪಂದ್ಯಗಳಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ 21,000ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ.
1952-53ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 9 ಇನಿಂಗ್ಸ್‌ಗಳಲ್ಲಿ 834 ರನ್ ಗಳಿಸಿದ್ದು, ಹಾರ್ವೆ ಅವರ ಅಮೋಘ ಸಾಧನೆಗಳ ಪೈಕಿ ಒಂದಾಗಿದೆ. 1949-50ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಹಾರ್ವೆ 5 ಪಂದ್ಯಗಳಲ್ಲಿ 4 ಶತಕಗಳ ಸಹಿತ ಒಟ್ಟು 660 ರನ್ ಗಳಿಸಿದ್ದರು. ತನ್ನ ಮೊದಲ 13 ಟೆಸ್ಟ್ ಪಂದ್ಯಗಳಲ್ಲಿ ಹಾರ್ವೆ ಒಬ್ಬರೇ 6 ಶತಕಗಳನ್ನು ಗಳಿಸಿದ್ದರು.
1948ರಲ್ಲಿ ಮೆಲ್ಬರ್ನ್ ನಲ್ಲಿ ಭಾರತದ ವಿರುದ್ಧ 19 ವರ್ಷ, 121ನೇ ದಿನದ ವಯಸ್ಸಿನಲ್ಲಿ 153 ರನ್ ಗಳಿಸಿದ್ದರು. ಟೆಸ್ಟ್ ಶತಕ ಗಳಿಸಿದ ಆಸ್ಟ್ರೇಲಿಯದ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದರು. ನಿವೃತ್ತಿಯ ನಂತರ ಹಾರ್ವೆ ಅವರು 12 ವರ್ಷಗಳ ಕಾಲ ರಾಷ್ಟ್ರೀಯ ಆಯ್ಕೆಗಾರರಾಗಿದ್ದರು. 2000ರಲ್ಲಿ ಆಸ್ಟ್ರೇಲಿಯನ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿದ್ದರು.