×
Ad

ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ : ಏಶ್ಯನ್ ದಾಖಲೆಯೊಂದಿಗೆ ಚಿನ್ನ ಗೆದ್ದ ನಿಶಾದ್ ಕುಮಾರ್

Update: 2025-10-03 21:55 IST

ನಿಶಾದ್ ಕುಮಾರ್ | Photo Credit : X 

ಹೊಸದಿಲ್ಲಿ, ಅ. 3: ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಶುಕ್ರವಾರ ಪುರುಷರ ಹೈಜಂಪ್ ಟಿ47 ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಏಶ್ಯನ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.

ನಿಶಾದ್ ತನ್ನ ಮೊದಲ ಪ್ರಯತ್ನದಲ್ಲಿ 2.14 ಮೀಟರ್ ಎತ್ತರ ಜಿಗಿದರು. ಈ ಮೂಲಕ 2023ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿನ ತನ್ನ 2.09 ಮೀಟರ್ ಸಾಧನೆಯನ್ನು ಉತ್ತಮ ಪಡಿಸಿದರು. 2.18 ಮೀಟರ್ ಜಿಗಿಯುವ ಪ್ರಯತ್ನದಲ್ಲಿ ಅವರು ಮೂರು ಬಾರಿ ವಿಫಲರಾದರು. ಹಾಗಾಗಿ 2.16 ಮೀಟರ್ ವಿಶ್ವ ದಾಖಲೆಯನ್ನು ಮುರಿಯಲು ಅವರಿಗೆ ಸಾಧ್ಯವಾಗಲಿಲ್ಲ.

ಚಿನ್ನದ ಪದಕದ ನೆಚ್ಚಿನ ಸ್ಪರ್ಧಿಯಾಗಿದ್ದ ಟೌನ್‌ಸೆಂಡ್‌ಗೆ 2.03 ಮೀಟರ್ ಮಾತ್ರ ಜಿಗಿಯಲು ಸಾಧ್ಯವಾಯಿತು. ಆ ಮೂಲಕ ಅವರು ಕಂಚು ಗೆದ್ದರು. ತುರ್ಕಿಯದ ಅಬ್ದುಲ್ಲಾ ಇಲ್ಗಾಝ್ 2.08 ಮೀಟರ್ ಐರೋಪ್ಯ ದಾಖಲೆಯೊಂದಿಗೆ ಬೆಳ್ಳಿ ಗೆದ್ದರು.

ಮಹಿಳೆಯರ 100 ಮೀಟರ್ ಟಿ12 ಸ್ಪರ್ಧೆಯಲ್ಲಿ ಭಾರತದ ಸಿಮ್ರಾನ್ 11.95 ಸೆಕೆಂಡ್ ಹೊತ್ತುಗಾರಿಕೆಯೊಂದಿಗೆ ಚಿನ್ನ ಗೆದ್ದರು. ಇದು ಅವರ ನೂತನ ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ.

ಮಹಿಳೆಯರ 200 ಮೀಟರ್ ಟಿ35 ವಿಭಾಗದಲ್ಲಿ ಭಾರತದ ಪ್ರೀತಿ ಪಾಲ್ ಕಂಚು ಗೆದ್ದರು. ಅವರು 30.03 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದರು. ಚೀನಾದ ಗುವೊ ಕಿಯಾಂಗಿಯನ್ 29.50 ಸೆಕೆಂಡ್‌ನೊಂದಿಗೆ ಚಿನ್ನ ಗೆದ್ದರೆ, ಇರಾಕ್‌ನ ಫಾತಿಮಾ ಸುವೇದ್ 30.00 ಸೆಕೆಂಡ್‌ನೊಂದಿಗೆ ಬೆಳ್ಳಿ ಜಯಿಸಿದರು.

ಭಾರತ ಈವರೆಗೆ 6 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನೊಂದಿಗೆ ಒಟ್ಟು 14 ಪದಕಗಳನ್ನು ಗೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News