×
Ad

ಮೊದಲ ಏಕದಿನ ಪಂದ್ಯ: ವೆಸ್ಟ್‌ಇಂಡೀಸ್‌ ಗೆ ಸೋಲುಣಿಸಿದ ಪಾಕಿಸ್ತಾನ ತಂಡ

ಹಸನ್ ನವಾಝ್ ಅರ್ಧಶತಕ

Update: 2025-08-09 20:06 IST

PC : X 

ಟ್ರಿನಿಡಾಡ್ ಆ್ಯಂಡ್ ಟೊಬಾಗೊ, ಆ.9: ಆತಿಥೇಯ ವೆಸ್ಟ್‌ಇಂಡೀಸ್ ತಂಡದ ವಿರುದ್ಧದ ಸರಣಿಯ ಆರಂಭಿಕ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದಿಂದ ಜಯಶಾಲಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಶುಭಾರಂಭ ಮಾಡಿದೆ. ತನ್ನ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಔಟಾಗದೆ 63 ರನ್ ಗಳಿಸಿದ ಹಸನ್ ನವಾಝ್ ಗೆಲುವಿನ ರೂವಾರಿಯಾದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 281 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು 48.5 ಓವರ್‌ ಗಳಲ್ಲಿ 5 ವಿಕೆಟ್‌ ಗಳ ನಷ್ಟಕ್ಕೆ 284 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಈ ಗೆಲುವಿನ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಹಗಲು-ರಾತ್ರಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನವಾಝ್ ಹಾಗೂ ಹುಸೇನ್ ತಲತ್ 6ನೇ ವಿಕೆಟ್‌ ಗೆ ಮುರಿಯದ ಜೊತೆಯಾಟದಲ್ಲಿ 104 ರನ್ ಸೇರಿಸಿ ಪಾಕಿಸ್ತಾನ ತಂಡದ ಗೆಲುವಿಗೆ ನೆರವಾದರು.

ಮೊದಲು ಬ್ಯಾಟಿಂಗ್‌ ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡವು 49 ಓವರ್‌ ಗಳಲ್ಲಿ 280 ರನ್ ಗಳಿಸಿ ಆಲೌಟಾಯಿತು. ಎವಿನ್ ಲೂವಿಸ್(60 ರನ್, 62 ಎಸೆತ, 3 ಸಿಕ್ಸರ್, 5 ಬೌಂಡರಿ),ಶೈ ಹೋಪ್ (55 ರನ್, 77 ಎಸೆತ,4 ಬೌಂಡರಿ) ಹಾಗೂ ರೋಸ್ಟನ್ ಚೇಸ್ (53 ರನ್, 54 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಕೊಡುಗೆ ನೀಡಿದರು.

ಪಾಕಿಸ್ತಾನದ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ(4-51)ಯಶಸ್ವಿ ಪ್ರದರ್ಶನ ನೀಡಿದರು. ನಸೀಂ ಶಾ(3-55)ಅವರು ಆಫ್ರಿದಿಗೆ ಸಾಥ್ ನೀಡಿದರು.

ಗೆಲ್ಲಲು 281 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 16 ರನ್ ಗಳಿಸುವಷ್ಟರಲ್ಲಿ ಸಯೀಮ್ ಅಯ್ಯೂಬ್(5) ವಿಕೆಟನ್ನು ಕಳೆದುಕೊಂಡಿತು. ಆಗ ಜೊತೆಯಾದ ಬಾಬರ್ ಆಝಮ್(47 ರನ್, 64 ಎಸೆತ, 5 ಬೌಂಡರಿ, 1 ಸಿಕ್ಸರ್)ಹಾಗೂ ಅಬ್ದುಲ್ಲಾ ಶಫೀಕ್(29 ರನ್, 33 ಎಸೆತ)2ನೇ ವಿಕೆಟ್‌ಗೆ 47 ರನ್ ಸೇರಿಸಿದರು.

ಶಫೀಕ್ ಔಟಾದ ನಂತರ ನಾಯಕ ಮುಹಮ್ಮದ್ ರಿಝ್ವಾನ್ ಜೊತೆ ಕೈಜೋಡಿಸಿದ ಆಝಮ್ 3ನೇ ವಿಕೆಟ್‌ಗೆ 55 ರನ್ ಸೇರಿಸಿದರು.

ಪಾಕಿಸ್ತಾನ ತಂಡವು 38ನೇ ಓವರ್‌ನಲ್ಲಿ ನಾಯಕ ರಿಝ್ವಾನ್(53 ರನ್, 69 ಎಸೆತ, 4 ಬೌಂಡರಿ)ವಿಕೆಟನ್ನು ಕಳೆದುಕೊಂಡಾಗ ಗೆಲುವಿಗೆ ಇನ್ನೂ 101 ರನ್ ಅಗತ್ಯವಿತ್ತು. ಆಗ ಜೊತೆಯಾದ ನವಾಝ್(ಔಟಾಗದೆ 63, 54 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ತಲತ್ (ಔಟಾಗದೆ 41, 37 ಎಸೆತ, 4 ಬೌಂಡರಿ, 1 ಸಿಕ್ಸರ್) 6ನೇ ವಿಕೆಟ್‌ಗೆ ಶತಕದ ಜೊತೆಯಾದ ಮೂಲಕ ಪಂದ್ಯವನ್ನು ಪಾಕ್‌ನತ್ತ ಸೆಳೆದರು.

ಶಮರ್ ಜೋಸೆಫ್ ಎಸೆದ 49ನೇ ಓವರ್‌ನ 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ನವಾಝ್ ಅವರು 5ನೇ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು. ತಲತ್‌ ಗೆ ಇದು ಎರಡನೇ ಏಕದಿನ ಪಂದ್ಯವಾಗಿದೆ. 2019ರಲ್ಲಿ ಏಕೈಕ ಪಂದ್ಯ ಆಡಿದ್ದರು.

ವಿಂಡೀಸ್ ಬೌಲಿಂಗ್‌ ನಲ್ಲಿ ಶಮರ್ ಜೋಸೆಫ್(2-65) ಎರಡು ವಿಕೆಟ್ ಪಡೆದರು.

ಸರಣಿಯ 2ನೇ ಪಂದ್ಯವು ರವಿವಾರ ನಡೆಯಲಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News